

ಕಡೂರು: ಪಟ್ಟಣದ ಸೌಂದರ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ದೇಶದ ಗಡಿಕಾಯುವ ಸೈನಿಕರಂತೆ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರು ಕೂಡ ಪ್ರತಿನಿತ್ಯ ಒಂದು ರೀತಿ ಸೈನಿಕರಂತೆ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿ ದೈನಂದಿನದ ಒತ್ತಡದ ಬದುಕು ಹಾಗೂ ಕಾರ್ಯದ ಒತ್ತಡದ ನಡುವೆ ಆರೋಗ್ಯದ ಕಾಳಜಿ ನಿರ್ಲಕ್ಷೃತನ ತೋರುತ್ತಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಸದೃಢ ಆರೋಗ್ಯಕ್ಕಾಗಿ ಕ್ರೀಡಾಕೂಟಗಳು ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಪೌರಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ತಮ್ಮ ಸೇವೆಯನ್ನು ಪರಿಗಣಿಸಿ ಸರ್ಕಾರ ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಆರೋಗ್ಯ ವಿಮೆ, ದೈನಂದಿನ ಕೆಲಸ ಕಾರ್ಯಗಳಿಗೆ ಸಮವಸ, ರಕ್ಷಾ ಕವಚಗಳನ್ನು ಒದಗಿಸುತ್ತಿದೆ. ಪಟ್ಟಣದ ಸ್ವಚ್ಛತೆ ಕಾಪಾಡುವ ತಾವುಗಳು ತಮ್ಮ ಆರೋಗ್ಯದ ಕಾಳಜಿಗೂ ಹೆಚ್ಚು ಗಮನಕೊಡಬೇಕು. ಕರೊನಾ ಕಾಲಘಟ್ಟದಲ್ಲಿ ಪಟ್ಟಣಕ್ಕೆ ಪೌರಕಾರ್ಮಿಕರು ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಪುರಸಭೆ ಸದಸ್ಯರಾದ ಸೈಯಾದ್ ಯಾಸೀನ್, ಗೋವಿಂದರಾಜು, ಮರುಗುದ್ದಿ ಮನು, ಮೋಹನ್‌ನಾಯ್ಕ, ನಾಮಿನಿ ಸದಸ್ಯರಾದ ವಿನಯ್ ದಂಡಾವತಿ, ದೇವೆಂದ್ರ, ಅಬ್ದುಲ್ ಖಾದರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಬಿ.ಜಿ. ತಿಮ್ಮಯ್ಯ, ಕಾರ್ಯದರ್ಶಿ ಕೆ.ಎಂ. ವಾಸು, ಉಪಾಧ್ಯಕ್ಷ ಅಣ್ಣಪ್ಪ, ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಪ್ರೇಮ್‌ಕುಮಾರ್, ಚಿನ್ನರಾಜು, ಕದಂಬ ವೆಂಕಟೇಶ್ ಇದ್ದರು.