ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ

23 Nela ph 01 Asha workers Abhinandane
Published on

ನೆಲಮಂಗಲ: ಕರೊನಾ ಜನಜಾಗೃತಿ ಜತೆಗೆ ಸೋಂಕು ಹರಡುವಿಕೆ ತಪ್ಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅತ್ಯಮೂಲ್ಯ ಎಂದು ತುಮಕೂರು ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕವಾಡಿಮಠದ ಶ್ರೀ ವೀರಭದ್ರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಶನಿವಾರ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈರಸ್ ಭೀತಿ ಒಂದೆಡೆಯಾದರೆ ವಿವಿಧೆಡೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದರೂ ಹೆದರದೆ ಧೈರ್ಯದಿಂದ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರ ಸಾಹಸ ಮೆಚ್ಚುವಂತಹದ್ದು. ಇವರ ಸೇವೆ ಗುರುತಿಸಿ ಬಮುಲ್‌ನಿಂದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿನ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹಧನ ನೀಡಲು ಮುಂದಾಗಿರುವುದು ಅರ್ಥಪೂರ್ಣವಾಗಿದೆ. ಇದನ್ನು ರಾಜ್ಯವ್ಯಾಪಿ ವಿಸ್ತರಣೆ ಮಾಡಿರುವ ಸಹಕಾರ ಸಚಿವರ ನಿರ್ಧಾರ ಪ್ರಶಂಸನೀಯ ಎಂದರು.

ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಲಾಕ್‌ಡೌನ್ ಸನ್ನಿವೇಶದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಸ್ಮರಣೀಯ. ಆದ್ದರಿಂದ ರಾಜ್ಯದ 42 ಸಾವಿರ ಆಶಾಕಾರ್ಯಕರ್ತೆಯರಿಗೆ 3ಸಾವಿರ ರೂ.ಪ್ರೋತ್ಸಾಹಧನದ ಜತೆಗೆ ಗೌರವ ಅರ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಈಗಾಗಲೇ ವೈದ್ಯರು ವಿವಿಧ ಬೇಡಿಕೆಯನ್ನು ಸರ್ಕಾರದ ಮುಂದಿರಿಸಿದ್ದಾರೆ. ಮೇ 31ರ ಬಳಿಕ ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಹೊರರಾಜ್ಯ, ದೇಶಗಳಿಂದ ರಾಜ್ಯಕ್ಕೆ ಬರುವುದನ್ನು ತಡೆಯಲಾಗುತ್ತಿದ್ದು, ಆದಾಗ್ಯೂ ಬಂದವರನ್ನು 14 ದಿನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು ಎಂದರು.

ಕರೊನಾ ಭೀತಿಯಿಂದ ಖಾಸಗಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆಗಳಿಗೆ ಬೀಗ ಹಾಕಿಕೊಂಡಿದ್ದ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ಕಾರ್ಯಕರ್ತೆಯರನ್ನು ಗೌರವಿಸುವುದು ಕರ್ತವ್ಯ. ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೆರವು ನೀಡುವಂತೆ ಬಮುಲ್‌ಗೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ಬಮುಲ್‌ನಿಂದ ತಾಲೂಕಿನ 152ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಪುಷ್ಪನಮನ ಸಲ್ಲಿಸಿ ಪ್ರಮಾಣ ಪತ್ರ ನೀಡಿ, ಬಮುಲ್ ಉತ್ಪನ್ನಗಳಾದ ನಂದಿನಿ ತುಪ್ಪ ಸಿಹಿ ಇದ್ದ ಕಿಟ್ ವಿತರಣೆ ಮಾಡಲಾಯಿತು.

ಲಾಕ್‌ಡೌನ್ ಆದೇಶ ಉಲ್ಲಂಘನೆ: ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ದೇಗುಲ ತೆರೆಯಬಾರದೆಂಬ ಲಾಕ್‌ಡೌನ್ ಆದೇಶವಿದ್ದರೂ ಕವಾಡಿಮಠದ ರುದ್ರೇಶ್ವರ ದೇವಾಲಯದಲ್ಲಿ ಪೂಜೆ ಮಾಡಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತವರ ಬೆಂಬಲಿಗರಿಗೆ ಆರತಿ ಕೊಟ್ಟಿದ್ದು ಚರ್ಚೆಗೆ ಗ್ರಾಸವಾಯಿತು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ವಿಧಾನಪರಿಷತ್ ಸದಸ್ಯ ಬಿ.ರವಿ ಮಾಜಿ ಸಚಿವ ಅಂಜನಾಮೂರ್ತಿ, ಮಾಜಿ ಶಾಸಕ ಎಂ.ವಿ.ನಾಗರಾಜು, ತಹಸೀಲ್ದಾರ್ ಎಂ.ಶ್ರೀನಿವಾಸ್, ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಂಗನಾಥ್, ಬೆಂಗಳೂರು ಸಹಕಾರ ಹಾಲು ಒಕ್ಕೂಟ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ಜಿ.ಆರ್.ಭಾಸ್ಕರ್, ಹರೀಶ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಸ್ವಾಮಿ, ವ್ಯವಸ್ಥಾಪಕ ಗೋಪಾಲಗೌಡ, ಜಗದೀಶ್, ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ಜಿ.ಎಚ್.ರಾಜಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net