

ಹೊಸಕೋಟೆ : ಮಗು ಹುಟ್ಟುವುದಕ್ಕೂ ಮೊದಲೇ ತಾಯಿಕಾರ್ಡ್ ಮೂಲಕ ತಾಯಿ, ಮಗುವಿನ ಆರೈಕೆ ಜತೆಗೆ ಪೌಷ್ಟಿಕ ಆಹಾರ ನೀಡಿ 6 ವರ್ಷದವರೆಗೆ ಅವರ ಆರೋಗ್ಯ ಕಾಳಜಿ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪೋಷಣ್ ಮಾಸಾಚರಣೆಯಲ್ಲಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಗೌರವಧನ ಹೆಚ್ವಿಸುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸಿದೆ. ಕಾರ್ಯಕರ್ತೆಯರು ಮಕ್ಕಳ ಪೋಷಣೆ ಜತೆಗೆ ಸಂಸ್ಕಾರ, ಸ್ವಚ್ಛತೆ ಹಾಗೂ ನೈರ್ಮಲ್ಯತೆ ಬಗ್ಗೆ ಕಲಿಸುವ ಮೂಲಕ ಭವಿಷ್ಯದ ಭದ್ರ ಬುನಾದಿ ಹಾಕಿಕೊಡುವ ಜವಾಬ್ದಾರಿ ಇದೆ. ಇದರ ಜತೆಗೆ ಮಕ್ಕಳಿಗೆ ಪ್ರತಿ ದಿನ ಮೊಟ್ಟೆ, ಆಹಾರ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಸರ್ಕಾರ ಹಾಗೂ ಎನ್ಜಿಒನಿಂದ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಅಂಗನವಾಡಿ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ನಂದಗುಡಿ ಅಂಗನವಾಡಿ ರಾಜ್ಯದ ಎರಡನೇ ಮಾದರಿ ಅಂಗನವಾಡಿಯಾಗಿದೆ. ತಾಲೂಕಿನಲ್ಲಿರುವ ಒಟ್ಟು 330 ಅಂಗನವಾಡಿಗಳಿದ್ದು, ಅದರಲ್ಲೂ 275 ಅಂಗನವಾಡಿಗಳಲ್ಲಿ ಕೈತೋಟಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ನವರಾತ್ರಿ ಪ್ರಯುಕ್ತ ಬಾಗಿನ, ಗರ್ಭಿಣಿಯರಿಗೆ ಶ್ರೀಮಂತ, ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ಗಳನ್ನು ಎಸ್ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ವಿತರಣೆ ಮಾಡಿದರು. ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್, ಕುಂಬಳಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ದೊಡ್ಡನಲ್ಲಾಳ ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವಣ್ಣ, ಸಿಡಿಪಿಒ ಶಿವಮ್ಮ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.