

ಕುಮಟಾ: ಸರ್ಕಾರದ ಯೋಜನೆಗಳ ಲಾಭ ಪಡೆಯಲು ಅರ್ಜಿ ಹಾಕಿ ಕಾಯುವುದು ವ್ಯವಸ್ಥೆಯ ಒಂದು ಭಾಗವಾದರೆ, ಅರ್ಜಿ ಹಾಕುವುದಕ್ಕೇ ತಿಂಗಳುಗಟ್ಟಲೆ ಕಾದು ಕೈಚೆಲ್ಲಬೇಕಾದ ದುಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ!
ಇತ್ತೀಚೆಗೆ ಜಿಲ್ಲೆಯ ಬಹುತೇಕ ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳು ಸಾರ್ವಜನಿಕರಿಗೆ ನಿಗದಿತ ಸೇವೆ ನೀಡುತ್ತಿಲ್ಲ. ಸರ್ವರ್ ಸಮಸ್ಯೆ ಎಂಬ ಮಾಮೂಲು ನೆಪದ ಹೊರತಾಗಿ ಹೊಸ ಹೊಸ ಸಮಸ್ಯೆಗಳು ಉದ್ಭವಿಸುತ್ತಿವೆ.
ಸೇವಾ ದುರುಪಯೋಗ ತಡೆಯುವ ಉದ್ದೇಶದಿಂದ ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳು ಮೇಲ್ದರ್ಜೆಗೇರುವ ಜತೆಗೆ ಷರತ್ತುಬದ್ಧ ಸೇವೆಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಸೇವಾ ಕೇಂದ್ರಗಳು ಬೆರಳಚ್ಚು ಮಾಪಕ ಸಹಿತ ತಾಂತ್ರಿಕ ವ್ಯವಸ್ಥೆಗಳನ್ನು ಉನ್ನತೀಕರಿಸಿಕೊಳ್ಳುವುದು ಕೂಡಾ ಹೊಸ ನಿಯಮಾವಳಿಯಲ್ಲಿದೆ. ನಿಯಮ ಪಾಲಿಸದಿದ್ದರೆ ಸೇವೆಗೆ ಅವಶ್ಯವಿರುವ ಅಂತರ್ಜಾಲ ಸಂಪರ್ಕಕೊಂಡಿಗೆ ಅನುಮತಿ(ಪಾಸ್‌ವರ್ಡ್) ನೀಡಲಾಗುವುದಿಲ್ಲ. ಇಡೀ ತಾಲೂಕಿನಲ್ಲಿ ಒಂದೋ-ಎರಡೋ ಸೇವಾ ಕೇಂದ್ರಗಳನ್ನು ಹೊರತುಪಡಿಸಿ ಉಳಿದೆಡೆ ಜನರ ಸಾಮಾನ್ಯ ವಿಷಯಗಳ ಅರ್ಜಿಯನ್ನೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸೇವಾ ಕೇಂದ್ರಗಳನ್ನು ಪ್ರಶ್ನಿಸಿದರೆ, ನಮಗೆ ಬಿಟ್ಟಿಲ್ಲ, ಪಾಸ್‌ವರ್ಡ ಕೊಟ್ಟಿಲ್ಲ ಮುಂತಾಗಿ ಹೇಳುತ್ತಾರೆ. ಜಿಲ್ಲಾದ್ಯಂತ ಇದೇ ಪರಿಸ್ಥಿತಿ ಇದೆ. ಇದರೊಟ್ಟಿಗೆ ಸೇವಾಕೇಂದ್ರಗಳು ಜನರಿಂದ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳು ಕೂಡಾ ಕೇಳಿಬರುತ್ತಿವೆ.
ಇನ್ನೊಂದೆಡೆ ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರ ಹಂಚಿಕೆ ಮಾಡುವಾಗ ಕಡ್ಡಾಯ ತಾಂತ್ರಿಕ ನೈಪುಣ್ಯವನ್ನು ಕಡೆಗಣಿಸಲಾಗಿದೆ. ಸೇವಾ ಕೇಂದ್ರ ನಡೆಸುವವರಿಗೆ ಸಮರ್ಪಕ ತರಬೇತಿ ಇಲ್ಲ. ಅಪರೂಪಕ್ಕೊಮ್ಮೆ ಪಡಿತರ ಚೀಟಿ ಸಂಬಂಧಿತ ಸೇವೆಗಳಿಗೆ ಅವಧಿ ವಿಸ್ತರಣೆ ಮಾಡಿದರೂ ಕೆಲಸ ಸುಸೂತ್ರವಾಗುತ್ತಿಲ್ಲ. ಅಪರೇಟರ್‌ಗೆ ಸೂಕ್ತ ತರಬೇತಿ ಕೊರತೆಯಿಂದ ಸಲ್ಲಿಕೆಯಾದ ಅರ್ಜಿ ತಿರಸ್ಕೃತವಾಗುತ್ತಿದ್ದು ಪುನಃ ಅರ್ಜಿ ಸಲ್ಲಿಸಲು ವಿನಾಕಾರಣ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಎಲ್ಲ ಸೇವೆಗಳ ಕೇಂದ್ರಬಿಂದು ‘ಸೇವಾಸಿಂಧು’ ಪೋರ್ಟಲ್ ಸದಾಕಾಲ ಒಂದಿಲ್ಲೊಂದು ಸಮಸ್ಯೆಯ ತಾಣವಾಗಿದ್ದು ಪುಟ ತೆರೆದುಕೊಳ್ಳುವುದೇ ಅಪರೂಪ ಎಂಬಂತಾಗಿದೆ.
ಈ ಕುರಿತು ವಿಜಯವಾಣಿಯೊಂದಿಗೆ ಸಮಸ್ಯೆ ವಿವರಿಸಿದ ಪುನರ್ವಸತಿ ಕಾರ್ಯಕರ್ತರೊಬ್ಬರು, ‘ಅಂಗವಿಕಲರಿಗೆ ಸಂಬಂಧಿತ ಸೌಲಭ್ಯಗಳಿಗೆ ಆನ್‌ಲೈನ್ ಅರ್ಜಿ ಕರೆಯಲಾಗಿದ್ದರೂ ಅರ್ಜಿ ಹಾಕಲಾಗುತ್ತಿಲ್ಲ ಎಂದು ನಮ್ಮ ಅಂಗವಿಕಲ ಬಂಧುಗಳು ಹೇಳುತ್ತಿದ್ದಾರೆ. ಕೆಲವೊಂದು ಸಾಮಾನ್ಯ ವಿಷಯಗಳಿಗೆ ಮೊದಲೆಲ್ಲ ಮ್ಯಾನ್ಯುಯೆಲ್ ಆಗಿ ಮಾಹಿತಿ ಪಡೆದು ಅರ್ಜಿ ಸಲ್ಲಿಸುವ ವ್ಯವಸ್ಥೆ ಇತ್ತು. ಈಗ ಎಲ್ಲವನ್ನೂ ಆನ್‌ಲೈನ್ ಮಾಡಿರುವುದು ಉತ್ತಮವಾದರೂ ವ್ಯವಸ್ಥೆಯ ಗೊಂದಲದಿಂದ ಸೌಲಭ್ಯಗಳು ಜನರನ್ನು ತಲುಪುವುದೇ ಕಷ್ಟವಾಗಿದೆ’ ಎಂದರು.
ಪಡಿತರ ಚೀಟಿಯ ವಿಳಾಸ ಬದಲಾವಣೆಗಾಗಿ ಎರಡು ಬಾರಿ ಸೇವಾ ಕೇಂದ್ರಕ್ಕೆ ಹೋಗಿದ್ದು ಎರಡು ಬಾರಿಯೂ ಅರ್ಜಿ ಹಾಕುವ ಹಂತದಲ್ಲೇ ತಿರಸ್ಕೃತವಾಗಿ ಮೂರ್ನಾಲ್ಕು ತಿಂಗಳು ಕಾಯುವಂತಾಯಿತು. ಎಲ್ಲ ಸೇವಾ ಕೇಂದ್ರದವರಿಗೆ ಸರಿಯಾದ ತರಬೇತಿ ಕೊಡಬೇಕು. ಹಾಗೆಯೇ ಅಂಗವಿಕಲರಿಗೆ ಬ್ಯಾಟರಿಚಾಲಿತ ವೀಲ್‌ಚೇರ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಹೋದರೆ ಸಂಬಂಧಪಟ್ಟ ವೆಬ್‌ಸೈಟ್ ತೆರೆಯುತ್ತಿಲ್ಲ ಎಂದು ಕೊನೆಗೂ ಅರ್ಜಿ ಹಾಕಲಾಗಲಿಲ್ಲ. - ಶ್ರೀಮತಿ ಕುಮಟಾ, ಗೃಹಿಣಿ ಗ್ರಾಮ ಒನ್, ಕರ್ನಾಟಕ ಒನ್‌ನಂತಹ ತಾಂತ್ರಿಕ ವ್ಯವಸ್ಥೆಗಳು ಮೇಲ್ನೋಟಕ್ಕೆ ಎಲ್ಲ ಸರಿ ಎನಿಸಿದರೂ ವಾಸ್ತವದಲ್ಲಿ ನಿಷ್ಪ್ರಯೋಜಕ ಎಂಬಂತಾಗಿವೆ. ಗ್ರಾಮ ಪಂಚಾಯಿತಿಗಳಲ್ಲೂ ಅಂತರ್ಜಾಲ ವ್ಯವಸ್ಥೆಯ ಮೂಲಕ ಜನರಿಗೆ ನೀಡಲಾಗುವ ಸೇವೆಗಳು ಬಹುತೇಕ ಕುಂಠಿತವಾಗಿವೆ. ಸಾಮಾನ್ಯ ಅರ್ಜಿ ಹಾಕುವುದಕ್ಕೂ ಜನ ಪರದಾಡಬೇಕಿದೆ. ಸರ್ಕಾರದ ಸೌಲಭ್ಯಗಳಿಗೆ ಅರ್ಜಿ ಹಾಕುವುದೇ ಕಷ್ಟವಾಗುತ್ತಿದೆ. ಇದನ್ನೆಲ್ಲ ಸರಿಪಡಿಸುವುದು ಯಾವಾಗ? - ಎಂ.ಎಂ. ಹೆಗಡೆ, ಹೊಲನಗದ್ದೆ ಪಂಚಾಯಿತಿ ಅಧ್ಯಕ್ಷ