

ಸವಣೂರ: ಅನಾಥ ಮಕ್ಕಳ ಪಾಲನೆಗೆ ಭಕ್ತರ ನಿಸ್ವಾರ್ಥ ಸೇವೆ ಪ್ರೇರಣೆಯಾಗಿದೆ ಎಂದು ಹೂವಿನಶಿಗ್ಲಿ ಶ್ರೀ ಚನ್ನವೀರ ಸ್ವಾಮೀಜಿ ಹೇಳಿದರು. ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಗುರುಕುಲದಲ್ಲಿ ಶನಿವಾರ ಏರ್ಪಡಿಸಿದ್ದ ಸೈಕ್ಷಣಿಕ ವರ್ಷಕ್ಕೆ ಅನಾಥ ಮಕ್ಕಳ ದತ್ತು ಸ್ವೀಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಠದ ಗುರುಕುಲ ನಿರ್ವಹಿಸುತ್ತಿರುವ ಅನಾಥ ಆಶ್ರಮದ ಸುಮಾರು 300 ಮಕ್ಕಳ ನಿರ್ವಹಣೆಗೆ ನೂರಾರು ಭಕ್ತರ ಸಹಕಾರ ಹೆಮ್ಮೆ ಎನಿಸಿದೆ. ಕೊರಡೂರ ಗ್ರಾಮದ ಬಾಳೆಹೊಸೂರ ಕುಟುಂಬಸ್ಥರು 10 ಅನಾಥ ಮಕ್ಕಳನ್ನು ಶೈಕ್ಷಣಿಕ ವರ್ಷಕ್ಕೆ ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕೊರಡೂರ ಗ್ರಾಮದ ಗಿರಿಜಮ್ಮ ಶಿವಾನಂದ ಬಾಳೆಹೊಸೂರ ಅವರು 10 ಅನಾಥ ಮಕ್ಕಳನ್ನು ಶೈಕ್ಷಣಿಕ ವರ್ಷಕ್ಕೆ ದತ್ತು ಸ್ವೀಕರಿಸಿದ್ದಕ್ಕೆ 1.11 ಲಕ್ಷ ರೂ. ದೇಣಿಗೆ ನೀಡಿದರು. ಗಿರಿಜಮ್ಮ ಅವರ ಪುತ್ರ ಬೆಳಗಾವಿ ವಲಯ ಅರಣ್ಯ ಅಧಿಕಾರಿ ರಾಜು ಬಾಳೆಹೊಸೂರ ದಂಪತಿಯನ್ನು ಶ್ರೀ ಚನ್ನವೀರ ಸ್ವಾಮೀಜಿ ಸನ್ಮಾನಿಸಿದರು. ಪ್ರಮುಖರು, ಶಿಕ್ಷಕರು ಹಾಗೂ ಇತರರು ಇದ್ದರು.