

ಮಡಿಕೇರಿ: ಸುಭದ್ರ ದೇಶಕ್ಕಾಗಿ ಕೊಡಗಿನ ಸ್ವಾಭಿಮಾನಿ ಮತದಾರರು ಕಾಂಗ್ರೆಸ್‌ನ ಬಿಟ್ಟಿಭಾಗ್ಯಗಳನ್ನು ತಿರಸ್ಕರಿಸಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರನ್ನು ಗೆಲ್ಲಿಸಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲೆ ಎಂದೆಂದಿಗೂ ಬಿಜೆಪಿಯ ಭದ್ರಕೋಟೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಯದುವೀರ್ ಅವರಿಗೆ ೭೩ ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಜನರ ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ ಜನರಿಗೆ ಬೇಡವಾದ ಬಿಟ್ಟಿಭಾಗ್ಯಗಳಿಗೆ ಮೀಸಲಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರುಗಳು ಮತ ಗಳಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಎಂಟೂವರೆ ಸಾವಿರ ರೂ. ಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘೋಷಿಸಿದರೂ ಮತದಾರ ಈ ಭರವಸೆಗೆ ಮಣೆ ಹಾಕದೇ ಇರುವುದನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲವಾಗುತ್ತಿದೆೆ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಸಂಘಟಿತಗೊಂಡು ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ನ್ನು ಅಧಿಕಾರದಿಂದ ದೂರ ಇಡಲಿದೆ ಎಂದು ತಿಳಿಸಿದ್ದಾರೆ.