

ಕುಮಟಾ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 50 ಮತ್ಸ್ಯಾಶ್ರಯ ಮನೆ ಮಂಜೂರಾಗಿತ್ತು. ಇನ್ನೂ ಅರ್ಹರ ಆಯ್ಕೆ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೋಟೆಲ್ ಸಭಾಭವನದಲ್ಲಿ ಶುಕ್ರವಾರ ಮೀನುಗಾರಿಕೆ ಇಲಾಖೆಯಡಿ ಮುತ್ತು ಕೃಷಿ ಮತ್ತು ನೀಲಿ ಕಲಗ ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಅವರು ಮಾತನಾಡಿದರು. ಮೀನುಗಾರ ಸಮಾಜ ಸಮಗ್ರವಾಗಿ ಪ್ರಗತಿ ಸಾಧಿಸಬೇಕಾದರೆ ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಹೀಗಾದಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಬಹುಮುಖಿ ಕೃಷಿ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರವು ವಿವಿಧ ನವೀನ ವಿಧಾನಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಈ ನಿಟ್ಟಿನಲ್ಲಿ ಮುತ್ತು ಹಾಗೂ ನೀಲಿ ಕಲಗದ ಕೃಷಿಯು ಸ್ಥಳೀಯ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸಲಿದೆ ಎಂದರು.
ದಕ್ಷಿಣ ಕನ್ನಡ ಮೀನುಗಾರಿಕೆ ಮಾರಾಟ ಮಂಡಳಿ ಅಧ್ಯಕ್ಷೆ ದರ್ಶಿನಿ, ಭಟ್ಕಳದ ಮೀನುಗಾರಿಕೆ ಸಹಾಯಕ ನಿರ್ದೇಶಕ ರೇಣುಕಾ ಸ್ವಾಮಿ, ಕುಮಟಾ ಮೀನುಗಾರಿಕೆ ಸಹಾಯಕ ನಿರ್ದೇಶಕ ಸಚಿನ್ ಆರ್. ಪುತ್ರನ್ ಇತರರು ಇದ್ದರು.
ಮೀನುಗಾರಿಕೆ ಸಂದರ್ಭದಲ್ಲಿ ಬಳಸುವ ಸುರಕ್ಷತಾ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. 2022-23ನೇ ಸಾಲಿನಲ್ಲಿ ಮಂಜೂರಾಗಿದ್ದ 23 ಮತ್ಸ್ಯಾಶ್ರಯ ಮನೆಗಳ ಕಾರ್ಯಾದೇಶ ಪತ್ರವನ್ನು ಫಲಾನುಭವಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮುತ್ತು ಕೃಷಿಯ ಜತೆಗೆ ನೀಲಿ ಕಲಗದ ಕೃಷಿಯ ಕುರಿತು ಮಾಹಿತಿ ನೀಡಿದರು.