ಶಿಕ್ಷಣದಲ್ಲಿ ಅಡಗಿದೆ ಪ್ರಗತಿಯ ಗುಟ್ಟು

CLK ST KARYAKRAMA 17
Published on

ಚಳ್ಳಕೆರೆ: ಯಾವುದೇ ಸಮುದಾಯ, ದೇಶದ ಅಭಿವೃದ್ಧಿ ಶೈಕ್ಷಣಿಕ ಪ್ರಗತಿಯಲ್ಲಿ ಅಡಗಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ನಾಯಕರ ವಿದ್ಯಾರ್ಥಿ ನಿಲಯ, ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶಿಷ್ಟ ಪಂಗಡದ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕಿದೆ. ಸ್ಪರ್ಧಾ ಸಮಾಜದಲ್ಲಿ ಉದ್ಯೋಗ ದಕ್ಕಿಸಿಕೊಳ್ಳುವ ಗುರಿ ಇರಿಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಇಂಜಿನಿಯರ್ ಮತ್ತು ವೈದ್ಯರಾಗುವ ರೀತಿಯಲ್ಲಿ ಸಂಕಲ್ಪ ಮಾಡಬೇಕು. ಅದಕ್ಕೆ ಸರಿಯಾಗಿ ಕಠಿಣ ಓದು ಅಗತ್ಯ ಎಂದು ಕಿವಿಮಾತು ಹೇಳಿದರು.

ಸಮುದಾಯದ ಆದರ್ಶ ವ್ಯಕ್ತಿ, ಮಾಜಿ ಸಚಿವ ದಿವಂಗತ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಸೇವೆ ಸ್ಮರಣೀಯವಾಗಿದ್ದು, ಅವರ ಚಿಂತನೆಗಳನ್ನು ನಾವು ಪಾಲಿಸಬೇಕು ಎಂದರು.

ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ರಾಜನಹಳ್ಳಿ ಗುರುಪೀಠ ಸ್ಥಾಪನೆ ಮಾಡಿದ ಕೀರ್ತಿ ಮಾಜಿ ಸಚಿವ ತಿಪ್ಪೇಸ್ವಾಮಿ ಅವರಿಗೆ ಸಲ್ಲುತ್ತದೆ. ಅವರ ದೂರದೃಷ್ಟಿ ನಮ್ಮೆಲ್ಲರಿಗೂ ಆದರ್ಶ ಎಂದು ಹೇಳಿದರು.

ವಾಲ್ಮೀಕಿ ಕಲ್ಯಾಣ ಮಂಟಪ ಟ್ರಸ್ಟ್ ಸದಸ್ಯ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, 1965ರಲ್ಲಿ ಆರಂಭಗೊಂಡ ಟ್ರಸ್ಟ್ ಪ್ರಸ್ತುತ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಆಧಾರವಾಗಿದೆ. ಟ್ರಸ್ಟ್‌ನ ಆರ್ಥಿಕ ನೆರವಿನಿಂದ 200 ವಿದ್ಯಾರ್ಥಿಗಳಿಗೆ ತಲಾ 2 ಸಾವಿರದಂತೆ ಗೌರವಧನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಎಚ್.ಎಂ.ಮಲ್ಲಪ್ಪನಾಯಕ, ಬಿಇಒ ಕೆ.ಎಸ್.ಸುರೇಶ್, ಕೆಇಬಿ ರಾಜಣ್ಣ, ಬೆಸ್ಕಾಂ ಶ್ರೀನಿವಾಸ್, ನಗರಸಭಾ ಸದಸ್ಯರಾದ ಎಸ್.ಜಯಣ್ಣ, ಕವಿತಾ ಬೋರಯ್ಯ, ಸಿ.ಶ್ರೀನಿವಾಸ್, ಸುಮಾ ಭರಮಯ್ಯ, ಸುಜಾತಾ ಪಾಲಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮ್‌ದಾಸ್, ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ, ಟಿ.ಜೆ.ವೆಂಕಟೇಶ್, ಎಂ.ಚೇತನ್‌ಕುಮಾರ್, ಯಶೋದಾ ಗುರುಮೂರ್ತಿ, ಎಚ್.ಎಂ.ಸೂರ್ಯಪ್ರಭಾ, ಜಯಲಕ್ಷ್ಮೀ, ಕೆ.ಪಿ.ಭೂತಯ್ಯ, ಡಿ.ತಿಪ್ಪೇಸ್ವಾಮಿ, ಸಿ.ಕೆ.ರಂಗಸ್ವಾಮಿ, ಆರ್.ಪಾಪಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net