

ಅಜ್ಜಂಪುರ: ಜೀವನ ಪದ್ಧತಿ, ಆಹಾರ ಪದ್ಧತಿ ಬದಲಾಯಿಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಗುರುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿ ಆದರ್ಶ ಆಸ್ಪತ್ರೆ, ಪ್ರಸಾದ್ ನೇತ್ರಾಲಯ, ಆದರ್ಶ ಚಾರಿಟೆಬಲ್ ಟ್ರಸ್ಟ್, ಬೆಂಗಳೂರು ರ್ಟಿಲಿಟಿ ಆಸ್ಪತ್ರೆ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರದಲ್ಲಿ ಮಾತನಾಡಿ, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದರು.
ಡಾ. ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಜನಸಂಖ್ಯೆ, ಆಸ್ಪತ್ರೆ, ವೈದ್ಯರು ಹೆಚ್ಚಾಗಿದ್ದು ಅಷ್ಟೇ ಪ್ರಮಾಣದಲ್ಲಿ ಕಾಯಿಲೆ ಜಾಸ್ತಿ ಆಗುತ್ತಿದೆ. ಧೂಮಪಾನ, ಮದ್ಯಪಾನ ಮತ್ತು ಗುಟ್ಖಾದಿಂದ ದೂರವಿರಬೇಕೆಂದು ಸಲಹೆ ನೀಡಿದರು.
ಕಡೂರು ಯಳನಡು ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ವೈದ್ಯರು ಸಲಹೆ, ಚಿಕಿತ್ಸೆಯಿಂದ ಕಾಯಿಲೆ ಗುಣಪಡಿಸುವುದಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ಮಾತನಾಡಿಸಿ ಗುಣಪಡಿಸುವ ಕಲೆ ಅರಿತಿದ್ದಾರೆ ಎಂದರು.
ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹಣ್ಣೆ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಎಸ್.ಎಂ.ನಾಗರಾಜ್, ಡಾ. ಎ.ರಾಜಾ, ಡಾ. ಮೋಹನದಾಸ ಶೆಟ್ಟಿ, ವಾಣಿ ಶ್ರೀನಿವಾಸ ಮಾತನಾಡಿದರು.
ಶಿಬಿರದಲ್ಲಿ 2300 ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಮಾಜಿ ಶಾಸಕ ಡಿ.ಎಸ್.ಸುರೇಶ್, ಜಿಪಂ ಮಾಜಿ ಸದಸ್ಯ ಎಂ.ಕಷ್ಣಮೂರ್ತಿ, ಲೇಖಕ ಮನಸುಳಿ ಮೋಹನ್, ಸಿಇಒ ವಿಮಲಾ ಚಂದ್ರಶೇಖರ್, ಜಿ.ಎಸ್.ಪ್ರಕಾಶ, ಜಿ.ಎಸ್.ಓಂಕಾರಮೂರ್ತಿ, ಎ.ಸಿ.ಚಂದ್ರಪ್ಪ ಇದ್ದರು.