ಎರಡನೇ ಹಂತದ ಮತದಾನ ಇಂದು

26HNL2
Published on

ಹಾವೇರಿ: ಎರಡನೇ ಹಂತದ ಗ್ರಾಪಂ ಚುನಾವಣೆಗೆ ಡಿ. 27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನವಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಬ್ಯಾಡಗಿ, ಸವಣೂರ, ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳ 105 ಗ್ರಾಪಂಗಳಲ್ಲಿ ಮತದಾನ ನಡೆಯಲಿದೆ. ಈ ವ್ಯಾಪ್ತಿಯಲ್ಲಿ 1,461 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೊಷಣೆಯಾಗಿತ್ತು. ಇದರಲ್ಲಿ 75 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ 1,386 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 4,969 ಉಮೇದುವಾರರು ಅಂತಿಮ ಕಣದಲ್ಲಿದ್ದಾರೆ.

ಬ್ಯಾಡಗಿ ತಾಲೂಕಿನ 18 ಗ್ರಾಪಂಗಳ 83 ಕ್ಷೇತ್ರಗಳ 243 ಸ್ಥಾನಗಳಲ್ಲಿ 16 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 227 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸವಣೂರು ತಾಲೂಕಿನ 21 ಗ್ರಾಪಂಗಳ 112 ಕ್ಷೇತ್ರಗಳ 313 ಸ್ಥಾನಗಳಲ್ಲಿ 28 ಸ್ಥಾನಗಳಿಗೆ ಅವಿರೋಧ ಆಯ್ಕೆ ಯಾಗಿದೆ. 285 ಸ್ಥಾನಗಳಿಗೆ ಮತದಾನವಿದೆ. ಶಿಗ್ಗಾಂವಿ 27 ಗ್ರಾಪಂಗಳ 120 ಕ್ಷೇತ್ರಗಳ 346 ಸ್ಥಾನಗಳಲ್ಲಿ 21 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 325 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಾನಗಲ್ಲ ತಾಲೂಕಿನ 39 ಗ್ರಾಪಂಗಳ 202 ಕ್ಷೇತ್ರಗಳ 559 ಸ್ಥಾನಗಳಲ್ಲಿ 10 ಸ್ಥಾನಗಳಿಗೆ ಅವಿರೋಧ ಆಯ್ಕೆ, 549 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮತಗಟ್ಟೆ ವಿವರ: ನಾಲ್ಕು ತಾಲೂಕುಗಳಲ್ಲಿ 670 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ಹೆಚ್ಚುವರಿ ಸೇರಿ 109, ಸವಣೂರ 146, ಶಿಗ್ಗಾಂವಿ 158 ಹಾಗೂ ಹಾನಗಲ್ಲ ತಾಲೂಕಿನಲ್ಲಿ 257 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಧಿಕಾರಿಗಳು, ಪ್ರೊಸಿಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್, ಗ್ರೂಪ್ ಡಿ ನೌಕರರು, ಆರೋಗ್ಯ ಕಾರ್ಯಕರ್ತರು, ಸೆಕ್ಟರ್ ಅಧಿಕಾರಿಗಳು ಸೇರಿ 5,992 ಜನರನ್ನು ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಪ್ರತಿ ಮತಗಟ್ಟೆಗಳಿಗೂ ಕೋವಿಡ್ ಸುರಕ್ಷತಾ ಕಿಟ್ ವಿತರಿಸಲಾಗಿದೆ. ಕೋವಿಡ್ ಲಕ್ಷಣಗಳು ಕಂಡುಬಂದರೆ ಹಾಗೂ ಈಗಾಗಲೇ ಪಾಸಿಟಿವ್ ಇದ್ದರೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಕೊನೆಯ ಅವಧಿ ಸಂಜೆ 4ರಿಂದ 5 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮತದಾರರ ವಿವರ: ಬ್ಯಾಡಗಿ ತಾಲೂಕಿನಲ್ಲಿ 37,628 ಪುರುಷರು, 35,503 ಮಹಿಳೆಯರು ಹಾಗೂ 75 ಸೇವಾ ಮತದಾರರು ಸೇರಿ 73,206 ಮತದಾರರು, ಸವಣೂರ ತಾಲೂಕಿನ 49,747 ಪುರುಷರು, 46,477 ಮಹಿಳೆಯರು ಹಾಗೂ 132 ಸೇವಾ ಸೇರಿ 96,356 ಮತದಾರರು, ಶಿಗ್ಗಾಂವಿ ತಾಲೂಕಿನ 52,423 ಪುರುಷರು, 48,027 ಮಹಿಳೆಯರು, ಇತರೆ 4 ಹಾಗೂ 93 ಸೇವಾ ಮತದಾರರು ಹಾಗೂ ಹಾನಗಲ್ಲ ತಾಲೂಕಿನ 87,147 ಪುರುಷರು, 80,360 ಮಹಿಳೆಯರು, 5 ಇತರೆ ಹಾಗೂ 72 ಸೇವಾ ಮತದಾರರು ಸೇರಿ 1,67,574 ಮತದಾರರಿದ್ದಾರೆ. ಒಟ್ಟು ನಾಲ್ಕು ತಾಲೂಕಿನಲ್ಲಿ 2,26,945 ಪುರುಷ, 2,10,367 ಮಹಿಳಾ, 9 ಇತರೆ ಹಾಗೂ 372 ಸೇವಾ ಸೇರಿ 4,37,693 ಮತದಾರರಿದ್ದಾರೆ.

ಮಸ್ಟರಿಂಗ್ ಕೇಂದ್ರ: ಬ್ಯಾಡಗಿ ಪಟ್ಟಣದ ಎಸ್​ಜೆವಿ ಹಿರಿಯ ಪ್ರಾಥಮಿಕ ಶಾಲೆ, ಸವಣೂರ ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶಿಗ್ಗಾಂವಿ ನಗರದ ಜೆಎಂಜಿ ಶಾಲೆ ಹಾಗೂ ಹಾನಗಲ್ಲನ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ನಡೆಯಲಿದೆ. ಡಿ. 30ರಂದು ಅದೇ ಕೇಂದ್ರಗಳಲ್ಲಿ ಮತ ಎಣಿಕೆ ಮಾಡಲಾಗುವುದು.

ಚುನಾವಣಾ ಸಿಬ್ಬಂದಿಗೆ ಸ್ವಾಗತ

ಹಾನಗಲ್ಲ ತಾಲೂಕಿನ ಅಜಗುಂಡಿಕೊಪ್ಪ ಮತಗಟ್ಟೆಗೆ ಆಗಮಿಸಿದ ಎಲ್ಲ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆ ಅಧಿಕಾರಿ ಸುಭಾಸ ಹೊಸಮನಿ ಶನಿವಾರ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ಅಜಗುಂಡಿಕೊಪ್ಪದ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯನ್ನು ತಳಿರು ತೋರಣ, ಬಣ್ಣ ಬಣ್ಣ ಹಾಳೆಗಳಿಂದ ಅಲಂಕರಿಸಿ, ಮತಗಟ್ಟೆ ಆವರಣದಲ್ಲಿ ರಂಗೋಲಿಗಳಿಂದ ಶೃಂಗಾರಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net