ಬೆಂಗಳೂರಿನಲ್ಲಿ ಸ್ಫೋಟಕ ಇಟ್ಟು ಹೋಗಿದ್ದ ಆರೋಪಿ ಪತ್ತೆ ಕಾರ್ಯ ಚುರುಕು: ಸಿಎಂ ಸಿದ್ದರಾಮಯ್ಯ

mysore
Published on

ಮೈಸೂರು: ಬೆಂಗಳೂರಿನಲ್ಲಿ ಸ್ಫೋಟಕ ಇಟ್ಟು ಹೋಗಿದ್ದ ಆರೋಪಿಯ ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ಸ್ಫೋಟ ನಡೆಸಿದ್ದಾನೆ. ಹೋಟೆಲ್‌ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡು ಅಲ್ಲೇ ಕುಳಿತು ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿ ಹೋಗಿದ್ದಾನೆ ಎಂದು ತಿಳಿಸಿದರು.


ಆರೋಪಿ ಬಸ್‌ನಿಂದ ಇಳಿಯುವುದು, ಹೋಟೆಲ್‌ಗೆ ಬಂದಿರುವುದು ಸೇರಿದಂತೆ ಎಲ್ಲ ದೃಶ್ಯಾವಳಿಗಳು ಸಿಕ್ಕಿವೆ. ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಒಬ್ಬ ವ್ಯಕ್ತಿಯ ಕೃತ್ಯವೋ ಅಥವಾ ಸಂಘಟನೆಯ ಕೃತ್ಯವೋ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಇದು ಭಯೋತ್ಪಾದಕ ಕೃತ್ಯವೇ ಎಂಬುದು ಸ್ಪಷ್ಟವಾಗಿಲ್ಲ. ಎಲ್ಲವೂ ಇನ್ನೂ ತನಿಖೆಯ ಹಂತದಲ್ಲಿದೆ ಎಂದರು.


ಘಟನೆಯಲ್ಲಿ 9 ಜನರು ಗಾಯಗೊಂಡಿದ್ದಾರೆ. ಇವರೆಲ್ಲರೂ ಪ್ರಾಣಾಯಪಾಯದಿಂದ ಪಾರಾಗಿದ್ದಾರೆ ಎಂದರು.


ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮತ್ತು ಈಗಿನ ಬೆಂಗಳೂರು ಬಾಂಬ್ ಸ್ಫೋಟಕ್ಕೂ ಸಾಮ್ಯತೆ ಇಲ್ಲ. ಅದು ಕುಕ್ಕರ್‌ನಲ್ಲಿ ಆದ ಸ್ಫೋಟಕ. ಇಲ್ಲಿ ಕುಕ್ಕರ್‌ನಲ್ಲಿ ಬ್ಲಾಸ್ಟ್ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರೀತಿ ನಡೆದಿದೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಅವಧಿಯಲ್ಲಿ ಬಾಂಬ್ ಸ್ಫೋಟ ಆಗಿತ್ತಲ್ಲವೇ? ಅದು ಸಹ ಅಲ್ಪಸಂಖ್ಯಾತರ ಓಲೈಕೆ ಕಾರಣಕ್ಕೆ ಆಗಿತ್ತೇ? ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ಮಂಗಳೂರು ಬಾಂಬ್ ಸ್ಫೋಟಕ್ಕೂ ಹಾಗೂ ಬೆಂಗಳೂರು ಸ್ಫೋಟಕ್ಕೂ ಸಂಬಂಧವಿಲ್ಲ. ಈ ಘಟನೆಯನ್ನು ಖಂಡಿಸುತ್ತೇನೆ. ಈ ಪ್ರಕರಣದ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ವರದಿ ಇನ್ನೂ ಬಂದಿಲ್ಲ. ಅದು ಬಂದ ಮೇಲೆ ತಪ್ಪು ನಡೆದಿರುವುದು ಸಾಬೀತಾದರೆ ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದರು.


ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ವರದಿಯೇ ಬಂದಿಲ್ಲ ಎಂದ ಮೇಲೆ ಬಿಜೆಪಿಯ ಆರೋಪಗಳಿಗೆ ಏನು ಉತ್ತರ ಕೊಡಲಿ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net