ಅನ್ಯಗ್ರಹದಲ್ಲಿರುವ ಜೀವಿಗಳ ಹುಡುಕಾಟ

mysore
Published on

ಮೈಸೂರು: ಅನ್ಯಗ್ರಹದಲ್ಲಿ ಇರುವ ಜೀವಿಗಳ ಹುಡುಕಾಟಕ್ಕೆ ಚಂದ್ರಯಾನ-3 ಯೋಜನೆಯಲ್ಲಿ ಸಂಗ್ರಹಿಸಿರುವ ದತ್ತಾಂಶ ನೆರವಾಗಲಿದೆ ಎಂದು ಇಸ್ರೋ ವಿಜ್ಞಾನಿ ಪಿ.ಜಯಸಿಂಹ ಹೇಳಿದರು.


ನಗರದ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ‘ಬೆರಗು’ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹಗಳಲ್ಲಿ ಜೀವಿಗಳು ಇವೆಯೋ, ಇಲ್ಲವೋ ಎಂಬ ಗೊಂದಲ ಇದೆ. ಈ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಈ ನಿಟ್ಟಿನಲ್ಲಿ ಚಂದ್ರಯಾನ-3 ಯೋಜನೆಯಿಂದ ದೊಡ್ಡ ಪ್ರಗತಿ ದೊರೆತಿದೆ ಎಂದರು.


ಅನ್ಯ ಜೀವಿಗಳ ಇರುವಿಕೆಯನ್ನು ತರಂಗಾಂತರಗಳು ಸಾಬೀತುಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಭೂಮಿಯಿಂದ ಹೊರಹೊಮ್ಮವ ತರಂಗಾಂತರಗಳ ದತ್ತಾಂಶವನ್ನು ಚಂದ್ರಯಾನ ಯೋಜನೆ ಮೂಲಕ ಚಂದ್ರಗ್ರಹದಲ್ಲಿ ಸಂಗ್ರಹಿಸಲು ಸಾಧ್ಯವಾಗಿದೆ. ಇದೇ ರೀತಿಯ ಬೇರೆ ಗ್ರಹಗಳಿಂದ ಹೊರಹೊಮ್ಮುತ್ತಿರುವ ತರಂಗಗಳ ಕುರಿತು ಅಧ್ಯಯನಕ್ಕೆ ಇದುವೇ ದೊಡ್ಡ ಆಕರವಾಗಲಿದೆ ಎಂದು ಹೇಳಿದರು.


ಚಂದ್ರಯಾನ ಯೋಜನೆ ಯಶಸ್ಸು ದೊಡ್ಡ ಸಾಧನೆಯೊಂದಿಗೆ ದೇಶದ ಪ್ರತಿಷ್ಠೆಯನ್ನೂ ಹೆಚ್ಚಿಸಿದೆ. ಚಂದ್ರನ ಮೇಲೆ ಉಪಗ್ರಹ ಇಳಿಸಿದ 4ನೇ ದೇಶ ಎಂಬ ಹಿರಿಮೆಗೂ ಭಾರತ ಭಾಜನವಾಗಿದೆ. ಅಲ್ಲದೆ, ಇದು ವಿಜ್ಞಾನ ಲೋಕದ ಪ್ರಗತಿಗೂ ಪ್ರಧಾನ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.


ಚಂದ್ರಗ್ರಹದಲ್ಲಿ ಮೊದಲ ಬಾರಿಗೆ ಸಲ್ಫರ್ ಖನಿಜ ಇರುವುದನ್ನು ಈ ಯೋಜನೆ ಮೂಲಕ ದೃಢಪಡಿಸಲಾಗಿದೆ. ಭೂಮಿಯಲ್ಲಿ ದೊರೆಯುವ ಬಹಳಷ್ಟು ಖನಿಜಗಳು ಚಂದ್ರಗ್ರಹದಲ್ಲೂ ಇರುವುದನ್ನು ಪತ್ತೆ ಮಾಡಲಾಗಿದೆ ಎಂದರು.


ಚಂದ್ರಗ್ರಹದಲ್ಲಿ ಸಮತೋಲನ ತಾಪಮಾನ ಇಲ್ಲ. ಅಲ್ಲಿ ಭೂ ಆಳದ ಉಷ್ಣಾಂಶವನ್ನು ತಂತ್ರಜ್ಞಾನದ ನೆರವಿನ ಮೂಲಕ ತಿಳಿದುಕೊಳ್ಳಲಿದೆ. ಭೂ ಆಳದ 80 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ, ಭೂಮೇಲ್ಮೈಯ ಉಷ್ಣಾಂಶ ಮೈನಸ್ 10 ಡಿಗ್ರಿ ಸೆಲ್ಸಿಯಸ್ ಇದೆ. ಜತೆಗೆ, ಭೂಕಂಪನದ ಕುರಿತು ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ಚಂದ್ರಯಾನ ಯೋಜನೆಯಿಂದ ಈ ರೀತಿಯ ಬಹಳಷ್ಟು ನಿಖರ ಮಾಹಿತಿ ಪಡೆದಿದ್ದು, ಮುಂದಿನ ಸಂಶೋಧನೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.


ವಿಜ್ಞಾನದ ಅಭಿವೃದ್ಧಿಯೊಂದಿಗೆ ಮಾನವ ಪ್ರಗತಿ ಎಂಬುದು ಇಸ್ರೋ ಸಂಸ್ಥೆಯ ಆಶಯ. ಈ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಚಂದ್ರಯಾನ ಯೋಜನೆಯನ್ನೂ ರೂಪಿಸಿದೆ ಎಂದರು.


ಯಶಸ್ಸಿಯಾಗಿರುವ ಚಂದ್ರಯಾನ-3 ಯೋಜನೆಯ ಮೂಲಕ ಸಂಗ್ರಹಿಸಿರುವ ಮಾಹಿತಿ, ದತ್ತಾಂಶಗಳು ಮುಂದಿನ ಅನ್ವೇಷಣೆಗಳಿಗೆ ದಾರಿ ಆಗಲಿದೆ. ಇದು ಹೊಸ ಸಂಶೋಧನೆಗಳಿಗೆ ತೆರೆದುಕೊಂಡು ವಿಪುಲ ಅವಕಾಶಗಳನ್ನು ಸೃಷ್ಟಿಸಲಿದೆ. ಆದ್ದರಿಂದ ವಿಜ್ಞಾನ ಆಸಕ್ತಿ ಇರುವ ವಿದ್ಯಾರ್ಥಿಗಳು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಸಂಸ್ಥೆ ಅಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಗೋಪಾಲಸ್ವಾಮಿ ಸಮೂಹ ಸಂಸ್ಥೆಯ ಕರೆಸ್ಪಾಂಡೆಂಟ್ ಎನ್.ಆರ್.ಮಂಜುನಾಥ್, ಕಾರ್ಯದರ್ಶಿ ಎನ್.ಅನಂತರಾಮು, ಶೈಕ್ಷಣಿಕ ಸಲಹೆಗಾರ ಕೆ.ಎನ್.ಕೃಷ್ಣಪ್ರಸಾದ್, ಬಿಇಒ ಸಿ.ಎನ್.ರಾಜು ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net