ಎಲ್ಲೆ ಮೀರಿದ ಮೈಕ್ರೋ ಫೈನಾನ್ಸ್ ಹಾವಳಿ

KND MICRO FINANACE
Published on

ಕುಂದಗೋಳ: ತಾಲೂಕಿನ ಹಿರೇನೆರ್ತಿ ಗ್ರಾಮ, ಪಟ್ಟಣದ ಅಂಬೇಡ್ಕರ್ ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೈಕ್ರೋ ಫೈನಾನ್ಸ್​ನವರು ಮನೆಯ ಮಂದಿಯನ್ನು ಹೊರಗೆಳೆದು ಮನೆಗಳ ಬಾಗಿಲಿಗೆ ಬೀಗ ಹಾಕಿ, ನೋಟಿಸ್ ಅಂಟಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.

ತಾಲೂಕಿನ ಹಿರೇನೆರ್ತಿ ಗ್ರಾಮದ ಮೌಲಾಸಾಬ್ ಬೂಕಟಗಾರ ಹಾಗೂ ಕುಂದಗೋಳ ಪಟ್ಟಣದ ದಾಸಪ್ಪ ನಾಗಣ್ಣವರ ಅವರ ಮನೆಗಳಿಗೆ ಬೀಗ ಹಾಕಿ ನೋಟಿಸ್ ಅಂಟಿಸಲಾಗಿದೆ. ರಾತ್ರಿ ಮನೆಗೆ ಬಂದ ನಾಲ್ವರು ಫೈನಾನ್ಸ್ ನವರು ಎಲ್ಲ ಸಾಮಾನುಗಳನ್ನು ಹೊರಗೆ ಹಾಕಿ ಮನೆಗೆ ಬೀಗ ಜಡಿದರು. ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಕಟ್ಟಿಕೊಂಡು ಹೊರಗಡೆ ಹೋಗಿದ್ದಾರೆ. ಮಗ ಮೌಲಾಸಾಬ್ ಬೂಕಟಗಾರ, ಮನೆ ಬಿಟ್ಟು ಹೋಗಿದ್ದು, ಎಲ್ಲಿ ಇದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹಿರೇನೆರ್ತಿ ಗ್ರಾಮದ ಮಾಬುಬಿ ಮಮ್ಮುಸಾಬ್ ಬೂಕಟಗಾರ ಕಣ್ಣೀರಾದರು.

ತಹಸೀಲ್ದಾರ್, ತಾಲೂಕಾಡಳಿತದ ಅಧಿಕಾರಿಗಳು ಭೇಟಿ ನೀಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಚಿತ್ತಹರಿಸಿ ಮನೆಯೊಳಗೆ ಹೋಗಲು ಅನುವು ಮಾಡಿಕೊಡಬೇಕು ಎಂದು ಅಂಗಲಾಚುತ್ತಿದ್ದಾರೆ. ಸಾಲ ಪಡೆದವರು ಬಡ್ಡಿ ಕಟ್ಟಲೂ ಆಗದೆ, ಅಸಲು ಮುಟ್ಟಿಸಲೂ ಆಗದೆ ಆಸ್ತಿ, ಮನೆ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡುತ್ತಾರೆ. ಮನೆಗಳ ಬಾಗಿಲಿಗೆ ನೋಟಿಸ್ ಅಂಟಿಸಿ, ಬಾಗಿಲಿಗೆ ಬೀಗ ಜಡಿದು ಮಾನ, ಮರ್ಯಾದೆ ಕಳೆಯುವ ಸನ್ನಿವೇಶಗಳು ಹೆಚ್ಚಾಗಿವೆ ಎಂದು ಕರವೇ ತಾಲೂಕಾಧ್ಯಕ್ಷ ಕಲ್ಲಪ್ಪ ಹರಕುಣಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net