

ಚಳ್ಳಕೆರೆ: ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದರಿಂದ ಗ್ರಾಮದ ಹಾದಿ-ಬೀದಿಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಪತ್ರಿಕೆಗೆ ಸೋಮವಾರ ಹೇಳಿಕೆ ನೀಡಿರುವ ಗ್ರಾಮದ ಮಹಿಳೆಯರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಈ ಸಂಬಂಧ ದೂರು ಸಲ್ಲಿಸಿದ ಮಹಿಳೆಯರ ವಿರುದ್ಧ ಬೆದರಿಕೆ ಹಾಕಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ ನಮ್ಮ ಬದುಕು ಬೀದಿಗೆ ಬೀಳಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಿಢೀರ್ ಗ್ರಾಮಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿ, ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.