

ಕಾರವಾರ: ಬಿಸಿಲ ಝಳ, ತಾಪಮಾನ ಹೆಚ್ಚಿದ ಕಾರಣ ಮೀನುಗಳು ಸಮುದ್ರದಲ್ಲಿ ಆಳಕ್ಕಿಳಿಯುತ್ತಿರುವುದು ಮೀನುಗಾರರಿಗೆ ಸಮಸ್ಯೆಯಾಗಿ ಕಾಡಿದೆ. ಟ್ರಾಲರ್, ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸುವವರಿಗೆ ನಿರೀಕ್ಷಿತ ಮಟ್ಟದಲ್ಲಿ ಮೀನುಗಳು ಸಿಗುತ್ತಿಲ್ಲ.
ಕಳೆದ ಎರಡು ವಾರಗಳಿಂದ ನಿಧಾನಗತಿಯಲ್ಲಿ ಉಷ್ಣಾಂಶ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಬಿಸಿಲಿಗೆ ನೆಲದಷ್ಟೇ ವೇಗವಾಗಿ ಸಮುದ್ರದ ನೀರು ಕಾಯುತ್ತಿದೆ. ಹೀಗಾಗಿ, ತೀರಕ್ಕೆ ಸಮೀಪದಲ್ಲಿದ್ದ ಮೀನುಗಳ ಗುಂಪುಗಳು ವಲಸೆ ಹೋಗತೊಡಗಿವೆ ಎಂಬುದಾಗಿ ಕಡಲಜೀವಶಾಸ್ತ್ರಜ್ಞರು ಹೇಳುತ್ತಾರೆ. ಕಡಲತೀರದಿಂದ ನಾಲ್ಕೈದು ಕಿ.ಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ನಾಡದೋಣಿ ಮೀನುಗಾರರಿಗೆ ಮತ್ಸ್ಯಕ್ಷಾಮದ ಬಿಸಿ ತಟ್ಟಿದೆ. ಕಳೆದ 15 ದಿನಗಳಿಂದ ಬಹುತೇಕ ಕಡೆಗಳಲ್ಲಿ ನಾಡದೋಣಿಗಳನ್ನು ದಡದಲ್ಲೇ ನಿಲ್ಲಿಸಲಾಗಿದೆ.
ಜನವರಿಯಿಂದ ಮಾರ್ಚ್ ಅವಧಿಯವರೆಗೆ ಮೀನುಗಾರಿಕೆ ಕುಂಠಿತಗೊಳ್ಳುವುದು ಹೆಚ್ಚು. ಈ ಬಾರಿ ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮೀನುಗಳು ಲಭಿಸಿವೆ. ವಾರದಿಂದ ಈಚೆಗೆ ಟ್ರಾಲರ್, ಪರ್ಸಿನ್ ಬೋಟ್‌ಗಳಿಗೆ ಮೀನು ಸಿಗುವುದು ಕಡಿಮೆಯಾಗಿದೆ. ನಷ್ಟದ ಭಯಕ್ಕೆ ಬಿದ್ದು ಬೋಟ್ ಲಂಗರು ಹಾಕಿಟ್ಟಿದ್ದೇವೆ ಎನ್ನುತ್ತಾರೆ ಟ್ರಾಲರ್ ಬೋಟ್ ಮಾಲೀಕ ಸುಭಾಷ ದುರ್ಗೇಕರ.
ಇಲ್ಲಿನ ಬೈತಕೋಲ, ಮುದಗಾ, ಅಂಕೋಲಾದ ಬೇಲೆಕೇರಿ, ಕುಮಟಾದ ತದಡಿ, ಹೊನ್ನಾವರ, ಭಟ್ಕಳದ ಬಂದರುಗಳಲ್ಲಿ ಮೀನುಗಾರಿಕೆಗೆ ತೆರಳುವ ಬೋಟ್‌ಗಳ ಸಂಖ್ಯೆ ಕಡಿಮೆ ಇವೆ. ಬಹುತೇಕ ಬೋಟ್‌ಗಳು ದಡದಲ್ಲೇ ಲಂಗರು ಹಾಕಿ ನಿಂತಿವೆ. ಪರ್ಸಿನ್, ಟ್ರಾಲರ್ ಬೋಟ್‌ಗಳಲ್ಲಿ ಇಡಲಾಗಿದ್ದ ಬಲೆಗಳನ್ನು ದಡಕ್ಕೆ ತಂದು ದುರಸ್ತಿ ಮಾಡುವ ಕೆಲಸ ಚುರುಕು ಪಡೆದುಕೊಂಡಿದೆ.
ಆಗಸ್ಟ್‌ನಲ್ಲಿ ಆರಂಭಗೊಳ್ಳುವ ಯಾಂತ್ರೀಕೃತ ಬೋಟ್‌ಗಳ ಮೀನುಗಾರಿಕೆ ಮೇ ತಿಂಗಳವರೆಗೂ ನಡೆಯುತ್ತಿತ್ತು. ಈಚಿನ ವರ್ಷದಲ್ಲಿ ಡಿಸೆಂಬರ್ ವೇಳೆಗೆ ಮೀನುಗಳ ಕೊರತೆಯ ಸಮಸ್ಯೆ ಅನುಭವಿಸುತ್ತಿದ್ದೇವೆ. ಈ ಬಾರಿಯೂ ಫೆಬ್ರವರಿ ಮಧ್ಯಂತರದಿಂದಲೇ ಮೀನುಗಳ ಕೊರತೆ ಕಾರಣದಿಂದ ಬೋಟ್‌ಗಳನ್ನು ಲಂಗರು ಹಾಕಿಡುವ ಸ್ಥಿತಿ ಬಂದಿದೆ. ಸಮುದ್ರಕ್ಕೆ ಬೋಟ್ ಒಯ್ದರೆ ಸಾವಿರಾರು ಮೊತ್ತದ ಡೀಸೆಲ್, ಹತ್ತಾರು ಕಾರ್ಮಿಕರಿಗೆ ವೇತನ ಪಾವತಿಸಬೇಕಾಗುತ್ತದೆ. ನಿರೀಕ್ಷಿತ ಪ್ರಮಾಣದ ಮೀನು ಸಿಗದೆ ದಿನಕ್ಕೆ ಲಕ್ಷಾಂತರ ನಷ್ಟ ಅನುಭವಿಸುವ ಸ್ಥಿತಿ ಇದೆ ಎಂಬುದು ಬಹುತೇಕ ಮೀನುಗಾರರ ಅನಿಸಿಕೆಯಾಗಿದೆ.
ಬಿಸಿಲಿನ ಝಳ ಹೆಚ್ಚಾದಂತೆಲ್ಲ ಮೀನುಗಳು ನೀರಿನ ಆಳದಲ್ಲಿ ತಂಪನೆಯ ಜಾಗ ಅರಸುತ್ತ ಸಾಗುತ್ತವೆ. ಹೀಗಾಗಿ, ಈ ಸಮಯದಲ್ಲಿ ಕಡಲತೀರದಿಂದ ಹಲವು ಮೈಲು ದೂರದವರೆಗೆ ಮೀನು ಸಿಗುವುದು ಕಷ್ಟ. ಶಿವಕುಮಾರ ಹರಗಿ, ಕಡಲಜೀವಶಾಸ್ತ್ರಜ್ಞ