

ಉಳ್ಳಾಲ: ತಿಂಗಳ ಹಿಂದಷ್ಟೆ ಖರೀದಿಸಿದ್ದ ಇನ್ನೂ ನಂಬರ್ ಪ್ಲೇಟ್ ಕೂಡ ಆಗದಿದ್ದ ಸ್ಕೂಟರ್ ಗುರುವಾರ ತಡರಾತ್ರಿ ಬಳಿಕ ಏಕಾಏಕಿ ಬೆಂಕಿಗಾಹುತಿಯಾಗಿದೆ.
ಐಟಿಐ ವಿದ್ಯಾರ್ಥಿಯಾಗಿರುವ ಕುಂಪಲ ವಿದ್ಯಾನಗರ ನಿವಾಸಿ ರಾಕೇಶ್ ಎಂಬುವರು ಪಾರ್ಟ್‌ಟೈಮ್ ಕೆಲಸ ಮಾಡಿ ತಿಂಗಳ ಹಿಂದೆ ತೊಕ್ಕೊಟ್ಟಿನ ಶೋರೂಂನಲ್ಲಿ ಟಿವಿಎಸ್ ಕಂಪನಿಯ ಎಂಟಾರ್ಕ್ ಸ್ಕೂಟರ್ ಖರೀದಿಸಿದ್ದು ಮೂರು ದಿನಗಳ ಹಿಂದಷ್ಟೇ ಮೊದಲ ಇಎಂಐ ಕಂತನ್ನು ಕಟ್ಟಿದ್ದರು. ಗುರುವಾರ ವಾಲ್ಮೀಕಿ ಜಯಂತಿ ಪ್ರಯುಕ್ತ ಕಾಲೇಜಿಗೆ ರಜೆ ಇತ್ತು. ರಾತ್ರಿ 7 ಗಂಟೆ ಹೊತ್ತಿಗೆ ತನ್ನ ಮನೆಯಿಂದ ಕುಂಪಲ ಬೈಪಾಸ್‌ಗೆ ಬಂದಿದ್ದು, 8 ಗಂಟೆ ಹೊತ್ತಿಗೆ ಮನೆಗೆ ಹಿಂದಿರುಗಿ ಮನೆಯ ಸಿಟೌಟ್ ಬಳಿ ಸ್ಕೂಟರ್ ನಿಲ್ಲಿಸಿ ಮಳೆಗೆ ಒದ್ದೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದರು.
ತಡರಾತ್ರಿ ಒಂದು ಗಂಟೆ ಹೊತ್ತಿಗೆ ರಾಕೇಶ್ ಮಲಗಿದ್ದು, ಒಂದೂವರೆ ಗಂಟೆ ಹೊತ್ತಿಗೆ ಅವರ ತಾಯಿಗೆ ಎಚ್ಚರವಾದಾಗ ಹೊರಗಡೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಬೊಬ್ಬೆ ಹಾಕಿದ್ದು ಈ ಸಂದರ್ಭ ರಾಕೇಶ್ ಹೊರಗಡೆ ಹೋಗಿ ನೋಡಿದಾಗ ಸ್ಕೂಟರ್ ಹೊತ್ತಿ ಉರಿಯುತ್ತಿತ್ತು. ನೀರು ಹಾಕಿಸಿ ಬೆಂಕಿ ನಂದಿಸಿದ್ದರಿಂದ ಸ್ಕೂಟರ್‌ನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಿಡಿಯದ ಕಾರಣ ಭಾರಿ ಅನಾಹುತ ತಪ್ಪಿದೆ. ಬೆಂಕಿಯ ಕೆನ್ನಾಲಗೆಗೆ ಸ್ಕೂಟರ್‌ನ ಸಂಪೂರ್ಣ ಹಾನಿಯಾಗಿದೆ. ಮನೆಯ ಗೋಡೆ, ಕಿಟಕಿಗಳ ಗಾಜು, ಒಣಗಲು ಹಾಕಲಾದ ಬಟ್ಟೆ ಸುಟ್ಟು ಕರಕಲಾಗಿದೆ. ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ಬ್ಯಾಟರಿ ಸಿಡಿದು ಬೆಂಕಿ ಹತ್ತಿರುವುದಾಗಿ ಶಂಕಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.