

ಶೃಂಗೇರಿ: ಅಚ್ಚ ಅಂಬಲಿ, ಹಾಲು ಅಂಬಲಿ, ಬಣ್ಣದ ಸೌತೆಕಾಯಿ, ಬೇಲಿ ಮೇಲಿನ ದಾರೆ ಹೀರೆಕಾಯಿ, ನೂರಾಒಂದು ಕುಡಿ ಭೂಮಿತಾಯಿಗೆ ಬೈಕೆ ಬೈಕೆ ಎಂದು ಹಾಡುತ್ತ ತಾಲೂಕಿನ ರೈತರು ಗುರುವಾರ ಭೂತಾಯಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ಭೂಮಿ ಹುಣ್ಣಿಮೆ ಪ್ರಯುಕ್ತ ಕೃಷಿಕರು ಬುಧವಾರವೇ ಭರ್ಜರಿ ತಯಾರಿ ನಡೆಸಿದರು. ಸಾಗುವಳಿ ಜಮೀನಿನ ಸಮೀಪ ಪೂಜೆ ಮಾಡಲು ಸ್ಥಳವನ್ನು ಮಟ್ಟಮಾಡಿ, ಸಗಣಿ ಸಾರಿಸಿ, ಎರಡು ಬಾಳೆಕಂಬಗಳು, ಮಾವಿನಸೊಪ್ಪಿನ ತೋರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಾಲಂಕೃತಗೊಂಡ ಪುಟ್ಟ ಮಂಟಪ ಮಾಡಿದ್ದರು. ಗುರುವಾರ ಮುಂಜಾನೆ ಗದ್ದೆಗೆ ಪೂಜಿಸಲು ಬೇಕಾಗುವ ತೆಂಗಿನಕಾಯಿ, ವಿವಿಧ ಹೂಗಳು, ಅರಶಿಣ-ಕುಂಕುಮ, ಹಾಲು ಮುಂತಾದ ಪೂಜಾಸಾಮಗ್ರಿಗಳನ್ನು ಜಮೀನಿನ ಬಳಿ ಇರಿಸಿ ಶಂಖನಾದ, ಜಾಗಟೆ, ಪಟಾಕಿ ಸಿಡಿಸಿ ಪೂಜೆ ನೆರವೇರಿಸಿದರು. ಹಲವಾರು ಜಾತಿಗಳ ಸೊಪ್ಪು ಸೇರಿಸಿ ಮಾಡಿದ ಬೆರಕೆ ಸೊಪ್ಪಿನ ಪಲ್ಯ, ಬೆಲ್ಲ ಹಾಕಿ ಗೆಣಸು ಬೇಯಿಸಿ ತಯಾರಿಸಿದ ಸಿಹಿಪದಾರ್ಥ, ಪಾಯಸ, ಬಣ್ಣದಸೌತೆಕಾಯಿ ಪಲ್ಯ, ಚೀನಿಕಾಯಿ, ಸೋರೆಕಾಯಿ ಕಡಬು, ಸಾರು, ಅನ್ನ ಹೀಗೆ ವಿಶೇಷವಾಗಿ ತಯಾರಿಸಿದ ಅಡುಗೆಯನ್ನು ಸಾಗುವಾಳಿ ಗದ್ದೆಯಲ್ಲಿರಿಸಿ ಭೂಮಿತಾಯಿಗೆ ಬಯಕೆ ಶಾಸ್ತ್ರ ನೆರವೇರಿಸಿ, ಉತ್ತಮ ಸಲು ನೀಡಿ ನಮ್ಮನ್ನು ಕಾಪಾಡು ತಾಯಿ ಎಂದು ಕುಟುಂಬಸ್ಥರು ಪ್ರಾರ್ಥನೆ ಸಲ್ಲಿಸಿದರು.