ಶಾಲೆಗೆ ಶೌಚಗೃಹ ನಿರ್ಮಿಸಿಕೊಟ್ಟಿರುವುದು ಸಂತಸ ತಂದಿದೆ

10-03-2020 ALRp 01 (1)
Published on

ಆಲೂರು: ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ರಾಜ್ಯದ ನಾನಾ ಭಾಗಗಳಲ್ಲಿ ವಿವಿಧ ಉದ್ಯೋಗಗಳಲ್ಲಿ ತೊಡಗಿದ್ದು, ತಮ್ಮ ಕೆಲಸದ ಒತ್ತಡದ ನಡುವೆಯೂ ತಾವು ಕಲಿತ ಶಾಲೆಯ ಹಿತದ ಬಗ್ಗೆ ಚಿಂತಿಸಿ ಒಗ್ಗೂಡಿ ಶೌಚಗೃಹ ನಿರ್ಮಾಣ ಮಾಡಿರುವುದು ಸಂತಸ ತಂದಿದೆ ಎಂದು ಮಗ್ಗೆ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ ಮುಖ್ಯಶಿಕ್ಷಕ ಶಿಕ್ಷಕ ಎಚ್.ಎಸ್ ಧರ್ಮಪ್ಪ ಹೇಳಿದರು.

ತಾಲೂಕಿನ ಕೆ.ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ 2001ನೇ ಸಾಲಿನಲ್ಲಿ ಕಲಿತು ತೇರ್ಗಡೆ ಹೊಂದಿದ್ದ ಹಳೆಯ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಸುಮಾರು 50 ಸಾವಿರ ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡಿದ ಶೌಚಗೃಹವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಶಾಲೆ ಅಭಿವೃದ್ಧಿಗಾಗಿ ಹಳೆಯ ವಿದ್ಯಾರ್ಥಿಗಳು ನೆರವು ನೀಡಿದ್ದಾರೆ. ಶಾಲೆಯಲ್ಲಿ ಕಲಿತ ಅಭಿಮಾನದಿಂದ ಕೆಲ ಹಳೆಯ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಶಾಲೆಗೆ ಬೇಕಾಗಿದ್ದ ಶೌಚಗೃಹವನ್ನು ನಿರ್ಮಿಸಿಕೊಟ್ಟಿರುವುದು ಸ್ವಾಗತಾರ್ಹಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿ ಗುರುಪ್ರಸಾದ್ ಮಾತನಾಡಿ, ಶಾಲೆಯಲ್ಲಿ ಕಲಿತ್ತಿದ್ದೇವೆ ಎಂಬ ಹೆಮ್ಮೆ ಒಂದೆಡೆಯಾದರೆ, ಕಲಿತ ಶಾಲೆಗೆ ನಮ್ಮಿಂದ ಏನಾದರೂ ನೆರವು ಒದಗಿಸಬೇಕೆಂಬ ಹಿನ್ನೆಲೆಯಲ್ಲಿ ಶಾಲೆಗೆ ಬೇಕಾದ ಶೌಚಗೃಹ ನಿರ್ಮಿಸಿಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಜತೆಗೆ, ಮುಂದಿನ ಜೀವನಕ್ಕೆ ಬೇಕಾದ ಅಗತ್ಯ ಮಾಹಿತಿಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದದ ಮೂಲಕ ಅನುಭವ ಹಂಚಿಕೊಳ್ಳಲ್ಲಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಗುರುಪ್ರಸಾದ್, ಆಶಾ, ಮಧುರ, ಪ್ರಭಾವತಿ, ದರ್ಶನ್, ರವಿ, ಗುರು, ರೂಪಾ, ಶಾಲಾ ಸಹ ಶಿಕ್ಷಕರಾದ ವಾಸುದೇವ್, ನೀಲಕಂಠ, ರಾಮಚಂದ್ರ, ರಾಮೇಗೌಡ, ಮಂಜುನಾಥ್, ಅರುಣ, ಚನ್ನವೀರಯ್ಯ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net