ಸೋರುತ್ತಿದೆ ಶಾಲಾ ಕಟ್ಟಡ

Bel_school-building
Published on

ಮನೋಹರ ಬಳಂಜ ಬೆಳ್ತಂಗಡಿ

ಕಳಿಯ ಗ್ರಾಮ ಪಂಚಾಯಿತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಕಟ್ಟಡ ನಿರ್ಮಾಣವಾಗಿ 15 ವರ್ಷ ಕಳೆದುಹೋಗಿದೆ. ಅಂದಿನಿಂಲೂ 2 ಕೊಠಡಿಗಳಲ್ಲಿ ಮಳೆಗಾಲದ ಸಮಯ ನೀರು ಜಿನುಗುತ್ತಿರುತ್ತದೆ. ಮಳೆ ಬಿಟ್ಟರೂ ಟೆರೇಸ್ ಮೇಲಿನಿಂದ ಮಳೆ ನೀರು ಬೀಳುತ್ತಲೇ ಇರುತ್ತದೆ. ಶಾಲಾ ಕೊಠಡಿಯೊಳಗೆ ಹಾಗೂ ಜಗಲಿಯಲ್ಲಿ ಪಾದ ಮುಳುಗುವಷ್ಟು ನೀರು ನಿಂತಿರುವ ದೃಶ್ಯ ಕಾಣುತ್ತದೆ. ಕಟ್ಟಡ ಸಂಪೂರ್ಣ ಶಿಥಿಲವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸುವಂತಿಲ್ಲ. ಈ ಕಟ್ಟಡಕ್ಕೆ ಬೇಕಾಗಿದೆ ಕಾಯಕಲ್ಪ.

ಈ ಶಾಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 196 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಮಕ್ಕಳ ಸಂಖ್ಯೆ ಜಾಸ್ತಿಯಿದೆ. 2023-24ನೇ ಸಾಲಿನ 10ನೇ ತರಗತಿಯಲ್ಲಿ ಶೇ.98.28 ಫಲಿತಾಂಶ ಪಡೆದು ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿದೆ. ಗ್ರಾಮೀಣ ಪ್ರದೇಶದ ಬಡ ಮಕ್ಕಳು, ಪಾಲಕರು ಈ ಶಾಲೆಯನ್ನೇ ನೆಚ್ಚಿಕೊಂಡಿದ್ದಾರೆೆ. 9 ಶಿಕ್ಷಕರಿದ್ದು ಹಿಂದಿ ಶಿಕ್ಷಕರ ಕೊರತೆಯಿದೆ.
ಸೋರುವ 2 ಕೋಣೆಗಳಿಗೆ 3 ವರ್ಷದ ಹಿಂದೆ ಬೀಗ ಹಾಕಲಾಗಿದೆ. ಕಟ್ಟಡ ದುರಸ್ತಿ ಮಾಡಿದರೆ ಹಿಂದಿ ತರಗತಿ, ಮತ್ತೊಂದು ಕೋಣೆಯಲ್ಲಿ ಐ.ಟಿ.ಐ. ಆಟೋಮೊಬೈಲ್‌ಗೆ ಸಂಬಂಧಿಸಿದ ಉಪಕರಣಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ಮೇಲುಸ್ತುವಾರಿ ಸಮಿತಿ, ಪಾಲಕರ ಮತ್ತು ಶಿಕ್ಷಕರ ಅಭಿಪ್ರಾಯ.

30 ವರ್ಷದ ಹಿಂದೆ ನಿರ್ಮಾಣವಾದ 3 ದೊಡ್ಡ ಹಂಚಿನ ಮಾಡಿನ ಕಟ್ಟಡಗಳು ಶಿಥಿಲಗೊಂಡು 5-6 ವರ್ಷಗಳಿಂದ ಮುಚ್ಚಿ ಕೊಂಡಿದೆ. ಮೇಲ್ಛಾವಣಿಯ ಮರಮುಟ್ಟುಗಳು ಗೆದ್ದಲು ಹಿಡಿದು ನೇತಾಡಿಕೊಂಡಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಶಿಥಿಲವಾದ ಕಟ್ಟಡವನ್ನು ಕೆಡವಲು ಜಿಲ್ಲಾ ಪಂಚಾಯಿತಿ ಅನುಮತಿ ದೊರಕಿತ್ತು. ಶಿಥಿಲವಾದ ಕಟ್ಟಡದ ಪಕ್ಕದಲ್ಲಿ ಮಕ್ಕಳು ಓಡಾಡದಂತೆ ಹಗ್ಗ ಕಟ್ಟಿ ಬಂದೋಬಸ್ತು ಮಾಡಲಾಗಿದೆ. ಶಿಕ್ಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದಾರೆ. ಆದಷ್ಟು ಬೇಗನೆ ಹಳೇ ಕಟ್ಟಡ ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣವಾಗಬೇಕು ಎಂದು ಪಾಲಕರ ಆಶಯವಾಗಿದೆ. ಮಕ್ಕಳ ಪಾಲಕರು, ಕಳಿಯ ಗ್ರಾಪಂ, ವಿದ್ಯಾಭಿಮಾನಿಗಳು ಶಾಲೆಯ ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕೈಜೋಡಿಸುತ್ತಾರೆ. ಪ್ರಸ್ತುತ ವರ್ಷದಲ್ಲಿ ಹೊಸದಾಗಿ ಶಾಲಾ ಮೇಲುಸ್ತುವಾರಿ ಸಮಿತಿ ರಚನೆ ಆಗಲಿಲ್ಲ.

ಉದ್ಯೋಗದಲ್ಲಿರುವ, ಹೊರದೇಶಗಳಲ್ಲಿರುವ ಹಳೆಯ (ಹಿರಿಯ) ವಿದ್ಯಾರ್ಥಿಗಳು, ಸಂಘ-ಸಂಸ್ಥೆ, ಶಿಕ್ಷಣ ಪ್ರೇಮಿಗಳು ಜನಪ್ರತಿನಿಧಿಗಳ ಸಹಕಾರದಿಂದ ಶಾಲೆಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎಂದು ಉಪಪ್ರಾಂಶುಪಾಲೆ ಈಶ್ವರಿ ಕೆ.ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಭಾಂಗಣ, ಶೌಚಗೃಹ ಇಲ್ಲ

ಈಗಿರುವ ಮಕ್ಕಳ ಸಂಖ್ಯೆ ಅನುಗುಣವಾಗಿ ಕೊಠಡಿಗಳ ಕೊರತೆಯಿದೆ. ಕಂಪ್ಯೂಟರ್ ಕೊಠಡಿಯಲ್ಲಿ 8ನೇ ತರಗತಿ ನಡೆಯುತ್ತಿದೆ. 2015ರಲ್ಲಿ ನಿರ್ಮಾಣದ ಮಕ್ಕಳ ಅನ್ನಪೂರ್ಣ ಕೊಠಡಿಯಲ್ಲಿ 9ನೇ ತರಗತಿಯ 85 ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸುತ್ತಾರೆ. ಆದರೂ ಸ್ಥಳಾವಕಾಶದ ಸಮಸ್ಯೆ ಆಗಿದೆ. ಮುಖ್ಯಶಿಕ್ಷಕರ ಕೊಠಡಿಯಲ್ಲಿಯೇ ಅನ್ನ ದಾಸೋಹದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಮುಖ್ಯಶಿಕ್ಷಕರಿಗೆ ಹಾಗೂ ಸಹ ಶಿಕ್ಷಕರಿಗೆ ಕುಳಿತುಕೊಳ್ಳಲು ಸರಿಯಾದ ಕೊಠಡಿ ಹಾಗೂ ಸಿಬ್ಬಂದಿಗೆ ಶೌಚಗೃಹದ ವ್ಯವಸ್ಥೆ ಬೇಕಾಗಿದೆ. ಪಾಲಕರ ಸಭೆ ಮತ್ತು ಶಾಲೆಯಲ್ಲಿ ನಡೆಯುವ ಇನ್ನಿತರ ಕಾರ್ಯಕ್ರಮಗಳ ಸಂದರ್ಭದಲ್ಲಿ ಜನರಿಗೆ ಕುಳಿತುಕೊಳ್ಳಲು ಸಭಾಂಗಣ ಸಮಸ್ಯೆಯಿದೆ.

ಗೇರುಕಟ್ಟೆ ಪ್ರೌಢಶಾಲಾ ಟೆರೇಸ್‌ನ 2 ಕೊಠಡಿ ಶಿಥಿಲ ಸ್ಥಿತಿಯಲ್ಲಿದೆ. ಸರಿಪಡಿಸುವ ಬಗ್ಗೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುತ್ತೇವೆ. 35 ವರ್ಷಗಳ ಹಿಂದಿನ 3 ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿ ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆ ಇದೆ. ಮಕ್ಕಳಿಗೆ ತೊಂದರೆ ಆಗದಂತೆ ತಕ್ಷಣ ತೆರವು ಮಾಡುವುದಕ್ಕೂ ಸಂಬಂಧಿಸಿದ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತೇವೆ. ಇದನ್ನು ಸರಿಪಡಿಸುವ ಬಗ್ಗೆ ಪಂಚಾಯಿತಿ ಅನುದಾನಕ್ಕೆ ಅನುಗುಣವಾಗಿ ಶಾಲೆಯ ಸಣ್ಣಪುಟ್ಟ ಬೇಡಿಕೆಯನ್ನು ಗ್ರಾಪಂ ವತಿಯಿಂದ ಸಹಕಾರ ನೀಡುತ್ತಿದೆ. ಸಂತೋಷ್ ಪಾಟೀಲ ಎಸ್. ಕಳಿಯ ಪಿಡಿಒ

ಸಂತೋಷ್ ಪಾಟೀಲ ಎಸ್. ಕಳಿಯ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net