

ತ್ಯಾಗರ್ತಿ: ಸಾಗರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಮುಳುಕೆರೆ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಶಿಥಿಲವಾಗಿದ್ದರೂ ಗ್ರಾಮಸ್ಥರಿಗೆ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರಿಗೆ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಿ ಮುಳುಕೆರೆ ಗ್ರಾಮಸ್ಥರು, ಶಾಲಾ ಸಮಿತಿಯ ಸದಸ್ಯರು ಶಾಲೆ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಶಾಲಾ ಕಟ್ಟಡ ತುಂಬ ಹಳೆಯದಾಗಿದ್ದು ಗೋಡೆ ವಾಲಿಕೊಂಡಿದ್ದು ಮಳೆಗಾಲದ ಸಮಯದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಕಟ್ಟಡದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ. ಮಕ್ಕಳ ಸುರಕ್ಷತೆಗೆ ತಕ್ಷಣ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲಾಖಾ ಮುಖ್ಯಸ್ಥರು ಹಾಗೂ ಶಿಕ್ಷಣ ಸಚಿವರು ಸ್ಥಳಕ್ಕೆ ಭೇಟಿ ಪರಿಹಾರ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಶಾಲೆ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಅಲ್ಲದೇ ಈಗ ಶಾಲೆ ಇರುವ ಜಾಗ ತುಂಬ ಇಕ್ಕಟ್ಟಾದ ಜಾಗದಲ್ಲಿ ಇದೆ. ಶಾಲೆ, ಅಂಗನವಾಡಿ, ಅಕ್ಷರ ದಾಸೋಹ ಕಟ್ಟಡ, ಶೌಚಗೃಹ ಎಲ್ಲ ಒಟ್ಟಿಗೆ ಇದ್ದು ಮಕ್ಕಳಿಗೆ ತುಂಬ ತೊಂದರೆ ಆಗುತ್ತಿದೆ. ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಆಗಬೇಕು. ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಮೀಸಲು ಇಟ್ಟಿರುವ ಜಾಗ ಅತಿಕ್ರಮಣ ಆಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಶಾಲೆ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಬರೂರು ಗ್ರಾಪಂ ಅಧ್ಯಕ್ಷೆ ಚಂದಮ್ಮ, ಸದಸ್ಯರಾದ ಶಿವಮೂರ್ತಿ ಗುತ್ನಳ್ಳಿ, ಗ್ರಾಮದ ಪ್ರಮುಖರಾದ ಕನ್ನಪ್ಪ ಮುಳುಕೆರೆ, ಪರಸಪ್ಪ, ಶೇಖರಪ್ಪ, ಮಂಜುನಾಥ, ಎಸ್‌ಡಿಎಂಸಿ ಸದಸ್ಯರು ಇದ್ದರು.