

ಸಾಗರ: ಹಿಂದುಳಿದ ವರ್ಗಗಳ ಏಳಿಗೆಗಾಗಿ ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಯೋಜನೆಗಳು ಅನುಕರಣೀಯ ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಅವರ ಆಡಳಿತದ ಕಾರ್ಯ ವೈಖರಿ ಎಂದೆಂದಿಗೂ ಪ್ರಶಂಸನೀಯ ಎಂದು ತಹಸೀಲ್ದಾರ್ ಚಂದ್ರಶೇಖರನಾಯ್ಕ ಹೇಳಿದರು.
ನಗರದ ಅರಸು ಸಭಾಭವನದಲ್ಲಿ ಭಾನುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕಡುಬಡತನದ ನಡುವೆಯೇ ಅರಸು ಅವರು ಶಿಕ್ಷಣದ ಮೂಲಕ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡವರು. ಇಂದಿರಾ ಗಾಂಧಿಯವರು ಜಾರಿಗೆ ತಂದಿದ್ದ 20 ಅಂಶದ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದ ಹೆಗ್ಗಳಿಕೆ ಅವರದ್ದಾಗಿದೆ. ಕೂಲಿಗಾಗಿ ಕಾಳು ಯೋಜನೆ ಜಾರಿಗೆ ತರುವ ಮೂಲಕ ಹಸಿವುಮುಕ್ತ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಅರಸು ಅವರು ಶ್ರಮ ಶ್ಲಾಘನೀಯ ಎಂದು ಹೇಳಿದರು.
ಭೂಹೀನರಿಗೆ ಭೂಮಿ ಹಕ್ಕು ನೀಡುವ ಕಾಯ್ದೆ ಜಾರಿಗೆ ತರುವ ಮೂಲಕ ಗೇಣಿ ಪದ್ಧತಿ ನಿವಾರಣೆಗೆ ಅರಸು ಅವರು ನೀಡಿದ ಕೊಡುಗೆ ಅಪಾರ. ಅರಸು ಅವರ ಜತೆ ಶಾಸಕರಾಗಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಈ ಸಾಲಿನ ದೇವರಾಜ ಅರಸು ಪ್ರಶಸ್ತಿ ಸಂದಿರುವುದು ಕ್ಷೇತ್ರದ ಜನರಿಗೆ ಅತೀವ ಸಂತೋಷ ಉಂಟು ಮಾಡಿದೆ. ಅರಸು ರಾಜಕೀಯ ಮುತ್ಸದಿತನ ಎಲ್ಲರೂ ಅನುಸರಿಸಬೇಕು. ಅವರ ಉದಾತ್ತ ಚಿಂತನೆ, ಸಮ ಸಮಾಜ ನಿರ್ಮಾಣದ ಪರಿಕಲ್ಪನೆ ಯುವಜನರಿಗೆ ಮಾರ್ಗಸೂಚಿ ಎಂದರು.
ಉಪನ್ಯಾಸ ನೀಡಿದ ಸೊರಬ ಸರ್ಕಾರಿ ಉರ್ದು ಪ್ರೌಢಶಾಲೆಯ ಅಧ್ಯಾಪಕ ಕೆ.ಎಸ್.ರಮೇಶ್, ಅರಸು ಎನ್ನುವುದು ಒಂದು ಶಕ್ತಿ. ಹಿಂದುಳಿದ ವರ್ಗದ ಧ್ವನಿಯಾಗಿ ಅರಸು ಅವರು ಕೆಲಸ ಮಾಡಿದ್ದಾರೆ. ಭೂ ಸುಧಾರಣೆ ಕಾಯ್ದೆಯ ಹರಿಕಾರರಾಗಿ ಗೇಣಿ ರೈತರ ಬದುಕಿಗೆ ಬೆಳಕು ನೀಡಿದ ಅರಸು ಅವರನ್ನು ನಾಡು ಸದಾ ಸ್ಮರಿಸಿಕೊಳ್ಳಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸದ್ಭಾವನಾ ದಿನದ ಸಂದೇಶ ಬೋಧಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ, ಉಪ ತಹಸೀಲ್ದಾರ್ ಕಲ್ಲಪ್ಪ ಮೆಣಸಿನಾಳ್, ಪ್ರಮುಖರಾದ ಶಿವಾನಂದ ಕುಗ್ವೆ, ತುಕಾರಾಮ ಸಾಗರ್‌ಕರ್, ಮದನ್, ವಿ.ಟಿ.ಸ್ವಾಮಿ, ಮಹ್ಮದ್ ಹನೀಫ್, ಪರಮೇಶ್ವರ ದೂಗೂರು, ಬಿ.ನಾಗರಾಜ್, ಗುರುಕೃಷ್ಣ ಶೆಣೈ, ಈಶ್ವರನಾಯ್ಕ ಕುಗ್ವೆ, ಮಂಜಪ್ಪ, ಚೈತ್ರಾ, ಹೊಳೆಲಿಂಗಪ್ಪ, ಅನಸೂಯಾ ತಳವಾರ, ಪವಿತ್ರಾ ಮಹೇಶ ಕುಮಾರ್ ಇತರರಿದ್ದರು.