

ಹನೂರು: ಪ್ರತಿಯೊಬ್ಬರೂ ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸಬಲರಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಬಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ತಿಳಿಸಿದರು.
ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಳ್ಳಿಯಿಂದ ಪ್ರಾರಂಭವಾದ ಸಂಸ್ಥೆಯು ಇಂದು ರಾಜ್ಯವ್ಯಾಪಿ ಪಸರಿಸಿದ್ದು, 6 ಲಕ್ಷ ಸದಸ್ಯರನ್ನು ಒಳಗೊಂಡಿರುವುದರ ಮೂಲಕ ಪ್ರಸಿದ್ಧಿ ಪಡೆದಿದೆ. ಈ ಸಂಸ್ಥೆಯು ಕೃಷಿಕರಿಗೆ, ಮಹಿಳೆಯರಿಗೆ ಹಿಂದುಳಿದ ವರ್ಗಕ್ಕೆ ಆರ್ಥಿಕ ಸಹಾಯವನ್ನು ನೀಡುವುದರ ಜತೆಗೆ ಗ್ರಾಮೀಣಾಭಿವೃದ್ಧಿಯ ಸಂಕಲ್ಪವನ್ನು ತೊಟ್ಟಿದೆ. ಈ ದಿಸೆಯಲ್ಲಿ ಕೃಷಿ, ಶಿಕ್ಷಣ, ಸ್ವ ಉದ್ಯೋಗ, ಆರೋಗ್ಯ, ಸಹಕಾರ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತಿದೆ ಎಂದರು.
ಅಲ್ಲದೆ ಸದಸ್ಯರಲ್ಲಿ ಶಿಸ್ತುಬದ್ಧತೆಯನ್ನು ರೂಢಿಸಿಕೊಂಡಿದೆ. ಜತೆಗೆ ಸ್ವ ಸಹಾಯ ಸಂಘಗಳು ಅದರಲ್ಲೂ ಮಹಿಳೆಯರು ಸಾಲ ಸೌಲಭ್ಯವನ್ನು ಪಡೆಯುವುದರ ಮೂಲಕ ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಳ್ಳಲು ಈ ಯೋಜನೆಯ ಸೇವಾ ಕಾರ್ಯ ಶ್ವಾಘನೀಯ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯಿಂದ ದೊರಕುವ ಸವಲತ್ತುಗಳ ಪ್ರಯೋಜನ ಪಡೆದುಕೊಂಡು ಅಭಿವೃದ್ದಿ ಹೊಂದಬೇಕು ಎಂದು ತಿಳಿಸಿದರು.
ವೈದ್ಯ ಡಾ.ನಾಗಲಿಂಗಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ವೀಣಾ, ಜ್ಞಾನ ವಿಕಾಸ ಯೋಜನೆ ಅಧ್ಯಕ್ಷೆ ಶಾಂತಮ್ಮ, ವಲಯ ಮೇಲ್ವಿಚಾರಕ ಸುರೇಶ್, ಸಮನ್ವಯಾಧಿಕಾರಿ ಭಾನುಪ್ರಿಯಾ, ಒಕ್ಕೂಟದ ಅಧ್ಯಕ್ಷೆ ಪಾರ್ವತಮ್ಮ, ಶಿಕ್ಷಕಿ ಶಾಂತಮ್ಮ ಹಾಗೂ ಸಂಸ್ಥೆಯ ಸೇವಾ ಪ್ರತಿನಿಧಿಗಳಿದ್ದರು.