ಹಡಪದ ಅಪ್ಪಣ್ಣನವರ ವಚನಗಳು ಸಾರ್ವಕಾಲಿಕ ಬಬಲೇಶ್ವರ

Support for the strike called by the Karnataka State Municipal Corporation Employees' Union
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಂಗಮೇಶ ಬಬಲೇಶ್ವರ, ಬಸವರಾಜ ಯಲಿಗಾರ, ಸಂತೋಷ ಭೋವಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಿಜಶರಣ ಹಡಪದ ಅಪ್ಪಣ್ಣನವರು ನಮ್ಮ ನಾಡಿನ ಸ್ವತ್ತು. ಬಸವಾದಿ ಕಾಲದ ಎಲ್ಲ ಶರಣರು ಸಮ ಸಮಾಜ ನಿರ್ಮಿಸುವಲ್ಲಿ ಬಹಳಷ್ಟು ಶ್ರಮಿಸಿದವರು ಎಂದು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲರೂ ಶರಣರ ತತ್ವಾದರ್ಶಗಳನ್ನು, ಅವರ ವಚನಗಳ ಸಾರವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಿದೆ. ಶರಣರು ತೋರಿಸಿದ ಜ್ಞಾನ ಪಥದಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಜತೆಗೆ ಶಿವಶರಣರ ವಚನಗಳ ಪುಸ್ತಕಗಳನ್ನು ಓದುವಂತೆ ತಿಳಿಹೇಳಬೇಕು. ವಚನ ಸಂಸತಿ ಮನೆ&ಮನೆಗಳಿಗೆ ತಲುಪುವಂತಾಗಬೇಕು. ಅವರ ವಿಚಾರಧಾರೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ಶರಣರಿಗೆ ಗೌರವ ಸಲ್ಲುತ್ತದೆ ಎಂದು ತಿಳಿಸಿದರು.

ಡಿವೈಎಸ್​ಪಿ ಬಸವರಾಜ ಯಲಿಗಾರ ಮಾತನಾಡಿ, 12ನೇ ಶತಮಾನದ ಶರಣರು ಸಮಾಜದ ಓರೆಕೋರೆಗಳನ್ನು ತಿದ್ದಿದರು. ಬಸವಣ್ಣನವರು ಮೂಢನಂಬಿಕೆ ಹೋಗಲಾಡಿಸಲು ಹಡಪದ ಅಪ್ಪಣ್ಣ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿದರು.

ನಾವೆಲ್ಲರೂ ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ವಚನಗಳ ಸಂಶೋಧನೆ ನಿರಂತರವಾಗಿ ನಡೆಯಬೇಕು. ಅವರ ವಚನಗಳಲ್ಲಿನ ಆದರ್ಶ ವಿಚಾರಗಳು ಕೇವಲ ಜಯಂತಿಗಳಿಗೆ ಸೀಮಿತವಾಗದೆ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಬಸವರಾಜ ಹಡಪದ ವಿಶೇಷ ಉಪನ್ಯಾಸ ನೀಡಿ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸುಧಾರಣೆಗೆ ಹಡಪದ ಅಪ್ಪಣ್ಣನವರ ಕೊಡುಗೆ ಅಪಾರ. ಮೌಢ್ಯ ಮೀರಿ ಮನುಷ್ಯತ್ವದ ನೆಲೆಗಟ್ಟಿನಲ್ಲಿ ಸತ್ಕಾರ್ಯಗಳನ್ನು ಮಾಡುವ ಮೂಲಕ ಸಾರ್ಥಕ ಬದುಕು ಬದುಕಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ಸಾರಿದರು ಎಂದು ಹೇಳಿದರು.

ವಿಶಾಲಾ ಬಡಿಗೇರ ವಚನ ಗಾಯನ ನಡೆಸಿದರು. ಮಹಾನಗರ ಪಾಲಿಕೆ ಉಪ ಆಯುಕ್ತ ವೈ.ಎಚ್​. ನಾರಾಯಣಕರ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಬಸವರಾಜ ಶಿವಶರಣ, ಅಶೋಕ ಉತ್ನಾಳ, ಎಸ್​.ಜಿ. ದೇವೂರ, ವಿರುಪಾ ಕತ್ನಳ್ಳಿ, ದಶರಥ ನಾವಿ, ಪ್ರಕಾಶ ಹಡಪದ, ಮಲ್ಲಿಕಾರ್ಜುನ ಬಟಗಿ ಮತ್ತಿತರರಿದ್ದರು.

ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ವಿವಿಧ ಕಲಾತಂಡಗಳೊಂದಿಗೆ ಆರಂಭಗೊಂಡ ಭವ್ಯ ಮೆರವಣಿಗೆ ವಿವಿಧ ವೃತ್ತಗಳಲ್ಲಿ ಸಂಚರಿಸಿ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net