

ಮೈಸೂರು: ಸ್ವಾವಲಂಬಿ ಹಾಗೂ ಬಲಿಷ್ಠ ಭಾರತ ನಿರ್ಮಿಸುವಲ್ಲಿ ಇಂದಿರಾಗಾಂಧಿ ಅವರು ನೀಡಿದ ಕೊಡುಗೆಯಿಂದಲೇ ‘ಇಂಡಿಯಾ ಎಂದರೆ ಇಂದಿರಾ’ ಎನ್ನುವ ಮಾತು ಪ್ರಚಲಿತದಲ್ಲಿತ್ತು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಪ್ರೊ.ಎನ್.ಕೆ.ಲೋಲಾಕ್ಷಿ ಅಭಿಪ್ರಾಯಪಟ್ಟರು.
ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ನಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಇಂದಿರಾಗಾಂಧಿ ಅವರ 106ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು, ಬಡವರು ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ, ಬಡವರು ಜಮೀನ್ದಾರರ ಕೆಳಗೆ ಕೆಲಸ ಮಾಡುವುದನ್ನು ತಪ್ಪಿಸಿ ಉಳುವವನೇ ಭೂಮಿಗೆ ಒಡೆಯ ಕಾನೂನು ಜಾರಿಗೊಳಿಸಿ ಭೂಮಿ ಇಲ್ಲದವರಿಗೆ ಕೃಷಿ ಭೂಮಿ ದಕ್ಕಿಸಿಕೊಟ್ಟರು. ಇದೊಂದು ಕ್ರಾಂತಿಕಾರ ಹೆಜ್ಜೆ ಆಗಿತ್ತು ಎಂದು ಹೇಳಿದರು.
ನೆಹರು ಅವರ ಕಾಲದಲ್ಲಿ ಜಾರಿಗೊಳಿಸಿದ್ದ ಹಸಿರು ಕ್ರಾಂತಿ ಯೋಜನೆ ಬಲಪಡಿಸುವ ಮೂಲಕ ದೇಶ ಆಹಾರ ಸ್ವಾವಲಂಬನೆ ಸಾಧಿಸಲು ನೆರವಾಗಿದ್ದಲ್ಲದೆ ಆಹಾರ ದಾಸ್ತಾನು ಶೇ. 40ರಷ್ಟು ಹೆಚ್ಚಳಗೊಳಿಸಿದರು. ಖಾಸಗಿ ವ್ಯಕ್ತಿ, ಕಂಪನಿಗಳ ಸಂಪತ್ತು ಸಂಗ್ರಹ ತಪ್ಪಿಸಲು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಜನರಿಗೆ ಅನುಕೂಲವಾಗುವ ಬ್ಯಾಂಕ್ ನೀತಿಯನ್ನು ಜಾರಿಗೊಳಿಸಿದರು ಎಂದು ಹೇಳಿದರು.
ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಜಯಗಳಿಸಿ ಬಾಂಗ್ಲಾದೇಶ ಹುಟ್ಟಿಗೆ ಕಾರಣರಾದರೂ ಚೀನಾ ವಿರುದ್ಧದ ಸೋಲು ದೇಶವನ್ನು ಇಕ್ಕಟ್ಟಿನ ಪರಿಸ್ಥಿತಿಗೆ ದೂಡಿತ್ತು. ಈ ವೇಳೆ ದಿಟ್ಟ ನಿರ್ಧಾರ ಕೈಗೊಂಡು ಗಡಿಯನ್ನು ಭದ್ರಗೊಳಿಸುವ, ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಬಲಿಷ್ಠಗೊಳಿಸಲು ಶ್ರಮಿಸಿದರು. ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸುವ ಮೂಲಕ ಅಣ್ವಸ್ತ್ರ ಹೊಂದಿದ ದೇಶವಾಗಿ ಶಕ್ತಿಯುತಗೊಳಿಸಿದರು. ಮೀಜೊರಾಂ ದಂಗೆಯನ್ನು ಹತ್ತಿಕ್ಕಿ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸುವಂತೆ ಮಾಡಿದರು. ಶಿಮ್ಲಾ ಒಪ್ಪಂದದ ಅನ್ವಯ ಕಾಶ್ಮೀರ ಬಿಕ್ಕಟ್ಟು ಶಮನದಲ್ಲಿ ಮೂರನೇ ದೇಶ ಪ್ರವೇಶ ಪಡೆಯದಂತೆ ಮಾಡಿದ ಉಕ್ಕಿನ ಮಹಿಳೆಯಾದರು ಎಂದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ ದೇಶದ ಅರಣ್ಯ ಸಂಪತ್ತು ಉಳಿಯುವಂತೆ ಮಾಡಿದ ಇಂದಿರಾ, ಹುಲಿ ಯೋಜನೆ, ರಾಷ್ಟ್ರೀಯ ಉದ್ಯಾನ ರೂಪಿಸುವ ಮೂಲಕ ಅವರಲ್ಲಿದ್ದ ಪರಿಸರ ಕಾಳಜಿ ವ್ಯಕ್ತಪಡಿಸಿದರು.
1978ರಲ್ಲಿ ರಾಜ್ಯದ ಚಿಕ್ಕಮಗಳೂರಿನ ಸಂಸದೆಯಾಗಿ ಸಂಸತ್ ಪ್ರವೇಶಿಸಿದ್ದರು. ರಾಜ್ಯದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಕರ್ನಾಟಕದಲ್ಲಿ ಇಸ್ರೊ, ಎಚ್‌ಎಎಲ್, ಬಿಇಎಂಎಲ್, ಡಿಆರ್‌ಡಿಒ ಮೊದಲ ಸಾರ್ವಜನಿಕ ಸಂಸ್ಥೆಗಳನ್ನು ಬಲಿಷ್ಠಗೊಳಿಸಿದ ದೇಶದ ದೂರದರ್ಶಿತ್ವ ಹೊಂದಿದ್ದ ಪ್ರಧಾನಿ ಅವರಾಗಿದ್ದರು. ಹೀಗಾಗಿ ಇಂದಿರಾ ಎಂದರೆ ಇಂಡಿಯಾ ಎನ್ನುವಂತೆ ಮಾಡಿದ್ದರು ಎಂದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್‌ಗಳಾದ ಮೋದಾಮಣಿ, ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ನಗರ ಕಾಂಗ್ರೆಸ್ ಕಾರ್ಯದರ್ಶಿ ಎಂ.ಶಿವಣ್ಣ ಇತರರಿದ್ದರು.
ಅಲ್ಪ ಸಂಖ್ಯಾತ ಹೋರಾಟಗಾರ್ತಿ ಪ್ರಣತಿ ಪ್ರಕಾಶ್, ರೈತ ಮಹಿಳೆ ವಸಂತಕುಮಾರಿ, ಪೌರಕಾರ್ಮಿಕರಾದ ನರಸಮ್ಮ, ಉತ್ತಮ ಶುಶ್ರೂಷಕಿ ಪ್ರಶಸ್ತಿ ಪುರಸ್ಕೃತ ನಂದಿನಿ, ಆಶಾ ಕಾರ್ಯಕರ್ತೆ ಮಹದೇವಮ್ಮ ಅವರನ್ನು ಸನ್ಮಾನಿಸಲಾಯಿತು.