

ವಿಜಯಪುರ: ಸಂಘ-ಪರಿವಾರ ಇಲ್ಲದೇ ಹೋಗಿದ್ದರೆ ಹಿಂದುಗಳೆಲ್ಲರೂ ಮುಲ್ಲಾಗಳಾಗಿರುತ್ತಿದ್ದೆವು. ಸರ್ಕಾರ ಮಾಡುವ ಕೆಲಸವನ್ನು ಸಂಘ-ಪರಿವಾರ ಮಾಡುತ್ತಿದೆ. ಸಂಘ-ಪರಿವಾರದ ಮೇಲೆ ಈ ಸರ್ಕಾರಕ್ಕೇಕೆ ದ್ವೇಷ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇನ್ನೊಂದೆಡೆ ಸಚಿವ ಡಾ.ಎಂ.ಬಿ. ಪಾಟೀಲ ಸಹ ಹಿಂದು ಸಮಾಜವನ್ನು ಒಡೆಯುವಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರು ಸಂಘ-ಪರಿವಾರದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದರೆ ಏನರ್ಥ? ಕೋರ್ಟ್ ಸಹ ಸಂಘ ಪರಿವಾರ ರಾಜಕೀಯ ಸಂಘಟನೆ ಅಲ್ಲ ಎಂದು ಹೇಳಿದೆ. ಇದನ್ನು ಸಚಿವರು ಓದಿಲ್ಲವೇ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಹೇಳೂರೋ ಕೇಳೋರು ಯಾರೂ ಇಲ್ಲದಂತಾಗಿದೆ. ಒಂದರ್ಥದಲ್ಲಿ ಅಪ್ಪ-ಅಮ್ಮ ಇಲ್ಲದ ಪಕ್ಷವಾಗಿದೆ. ಒಂದು ಕಡೆ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದರೆ ಇನ್ನೊಂದೆಡೆ ಡಿ.ಕೆ. ಶಿವಕುಮಾರ ಅವರಿಗೆ ಸಿಎಂ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದು ಇನ್ನೊಬ್ಬರು ಹೇಳುತ್ತಾರೆ. ಆದರೆ ಡಿ.ಕೆ. ಶಿವಕುಮಾರ ಸುಮ್ಮನೆ ಕೂಡುವ ಹುಳ ಅಲ್ಲ, ಅದು ಟುಕುಟುಕು ಮಾಡುತ್ತಲೇ ಇರುತ್ತದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲೂ ಪಕ್ಷ ಬೇಧ ಮಾಡುತ್ತಿದೆ. ಆಡಳಿತ ಪಕ್ಷದವರಿಗೆ 50 ಕೋಟಿ ರೂ. ಅನುದಾನ ನೀಡಿದರೆ, ಪ್ರತಿಪಕ್ಷದವರಿಗೆ 25 ಕೋಟಿ ರೂ. ನೀಡಿ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡುತ್ತಿದೆ, ಈ ಸರ್ಕಾರ ಬಹಳ ದಿನ ಉಳಿಯಲ್ಲ, ರಾಷ್ಟಪತಿ ಆಳ್ವಿಕೆ ಬರಬಹುದು ಅಥವಾ ಮಧ್ಯಂತರ ಚುನಾವಣೆ ಬರಬಹುದು ಎಂದು ಈಶ್ವರಪ್ಪ ಭವಿಷ್ಯ ನುಡಿದರು.