

ಗೋಕರ್ಣ: ಭಾರತೀಯ ಸಂಸ್ಕೃತಿ ನಮ್ಮ ಸ್ವಭಾಷೆಗೆ ಮಾತೃ ಸ್ಥಾನದ ಪಾವಿತ್ರ್ಯೆ ನೀಡಿ ಪೂಜಿಸಿದೆ. ಇಂತಹ ಸ್ವಂತದ ಸ್ವಭಾಷೆಯನ್ನು ಅಲಕ್ಷಿಸುವುದು ಹೆತ್ತ ತಾಯಿಗೆ ನೀಡುವ ಅಗೌರವಕ್ಕೆ ಸಮನಾದುದು ಎಂದು ಇಲ್ಲಿನ ಅಶೋಕೆಯಲ್ಲಿ 32ನೇ ಸ್ವಭಾಷಾ ಚಾತುರ್ವಸ್ಯದಲ್ಲಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ 46ನೇ ದಿನವಾದ ಭಾನುವಾರದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ಅನುಗ್ರಹಿಸಿದರು.
ಹಲವು ಸಮಯಗಳಿಂದ ನಮ್ಮದೇ ಸ್ವಭಾಷೆಗೆ ಅನ್ಯ ಭಾಷಾ ಪದ ಬೆರೆಸಿ ಮಾಡಿಕೊಂಡಿರುವ ಕಲಸುಮೇಲೋಗರದಿಂದ ಮಾತೃಭಾಷೆನ್ನು ಸಹಜವಾಗಿ ಮಾತನಾಡಲಾರದ ದುಸ್ಥಿತಿಗೆ ಸಿಲುಕಿದ್ದೇವೆ. ಹೆತ್ತಮ್ಮನ ಬಳುವಳಿಯಾಗಿ ಬಂದ ಸ್ವಭಾಷೆಯನ್ನು ಪರಿಶುದ್ಧವಾಗಿ ಮಾತನಾಡಲು ಕೂಡ ಇಂದು ತರಬೇತಿ ಮತ್ತು ಪೂರ್ವ ತಯಾರಿಯ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಒಣ ಗಾಂಭೀರ್ಯ ಮತ್ತು ಕೃತಕ ಪ್ರತಿಷ್ಠಾ ಕಾಮನೆಯಿಂದ ಸ್ವಭಾಷೆಯಲ್ಲಿ ಇಂಗ್ಲಿಷ್ನಂತಹ ಪರಭಾಷಾ ಪದ ಬಳಕೆಯಿಂದಾಗಿ ಭಾರತೀಯ ಸ್ವಭಾಷೆಗಳ ಅಸ್ತಿತ್ವಕ್ಕೇ ಆಪತ್ತು ಬಂದೊದಗಿದೆ. ಊಟವೂ ಸೇರಿದಂತೆ ನಮ್ಮ ದೈನಂದಿನ ಸರ್ವ ಕಾರ್ಯಗಳಿಗೆ ಹೇಗೆ ನಾವು ನಮ್ಮ ಕೈಯ್ಯನ್ನೇ ಬಳಸುತ್ತೇವೆಯೋ ಹಾಗೆ ಮಾತು ಮತ್ತು ಸಕಲ ವ್ಯವಹಾರಗಳಲ್ಲಿ ಸ್ವಭಾಷೆಯೇ ವಿಜೃಂಭಿಸುವಂತಾಗಬೇಕು. ಈ ಮೂಲಕ ಸ್ವಭಾಷೆ ವಸ್ತುತಃ ಮಾತೃಸ್ಥಾನದಲ್ಲಿ ವಿರಾಜಮಾನವಾಗಲಿ ಎಂದು ಸೂಚಿಸಿದ ಶ್ರೀಗಳು ಆಶೀರ್ವಾದವನ್ನಿತ್ತರು.
ಭಾನುವಾರ ಪುತ್ತೂರಿನ ದ್ವಾರಕಾ ಸಮೂಹದ ಮುಖ್ಯಸ್ಥ ಗೋಪಾಲಕೃಷ್ಣ ಭಟ್ಟ ಕುಟುಂಬದವರಿಂದ ಸರ್ವಸೇವೆ ಸಮರ್ಪಿತವಾಯಿತು. ಇದೇ ವೇಳೆ ಗೋಪಾಲಕೃಷ್ಣ ಭಟ್ಟ ಅವರು ಅಶೋಕೆಯಲ್ಲಿನ ಗೋವಿಶ್ವದ ನೂತನ ಯೋಜನೆಯ ಪ್ರಾಯೋಜಕತ್ವದ ಸಂಕಲ್ಪ ಕೈಗೊಂಡರು.
ಶ್ರೀರಾಮಚಂದ್ರಾಪುರ ಮಾತೆಯರಿಂದ ಛಾತ್ರಭಿಕ್ಷಾ ನೆರವೇರಿತು. ಗಾಣಿಗ ಸಮಾಜದ ವತಿಯಿಂದ ಸ್ವರ್ಣ ಪಾದುಕಾ ಸೇವೆ ಸಮರ್ಪಿತವಾಯಿತು. ಚಾತುರ್ವಸ್ಯ ನಿಮಿತ್ತ ವಿದ್ವಾನ್ ದೀಪಕ ಶರ್ಮಾ ನೇತೃತ್ವದಲ್ಲಿ ಪುತ್ತೂರಿನ ಮೂಕಾಂಬಿಕಾ ಸಂಸ್ಥೆ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಂದ ವಿಶಿಷ್ಟವಾದ ಮಾತೃವಂದನೆ ಕಾರ್ಯಕ್ರಮ ನಡೆಯಿತು.
ಧರ್ಮಸಭೆಯಲ್ಲಿ ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣ ಶ್ರೀನಿವಾಸ ಹೆಗಡೆ, ಗಾಣಿಗ ಸಮಾಜ ಪ್ರಮುಖರಾದ ಮಹೇಶ ಶೆಟ್ಟಿ, ದಾಮೋದರ ಶೆಟ್ಟಿ ಕುಮಟಾ, ಭಟ್ಕಳದ ಮಾರುತಿ ಶೆಟ್ಟಿ,ಸುಭಾಷ ಶೆಟ್ಟಿ ಮತ್ತು ಹರಿಹರಪುರ ಮಠದ ಅಗಸ್ತ್ಯ ದಂಪತಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಮಂಜುನಾಥ ಸುವರ್ಣಗದ್ದೆ, ಜಿ.ಕೆ. ಹೆಗಡೆ, ಕೆ.ಎನ್. ಹೆಗಡೆ, ಅನುರಾಧಾ ಪಾರ್ವತಿ, ವಿಷ್ಣು ಬನಾರಿ, ಎಂ.ಎನ್. ಮಹೇಶ ಭಟ್ಟ, ಮತ್ತಿತರರಿದ್ದರು.