ಒಂದೇ ಜಾತಿ, ಧರ್ಮ ಸಂದೇಶ ಹೆಚ್ಚು ಪ್ರಸ್ತುತ

sri narayana guru
ಶೃಂಗೇರಿ ತಾಲೂಕು ಕಚೇರಿಯಲ್ಲಿ ನುಲಿಯ ಚಂದಯ್ಯ ಮತ್ತು ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಜನಾರ್ದನ ಮಂಡಗಾರು ಮಾತನಡಿದರು. ಗೌರಮ್ಮ, ಪ್ರವೀಣ್‌ಕುಮಾರ್, ಗೌರಮ್ಮ, ಭಾಸ್ಕರ್, ಪ್ರವೀಣ್ ಪೂಜಾರಿ ಇತರರಿದ್ದರು.
Published on

ಶೃಂಗೇರಿ: ಒಂದೇ ಜಾತಿ, ಧರ್ಮ, ಒಬ್ಬರೇ ದೇವರು ಎಂದು ಸಮಸ್ತ ಮನುಕುಲಕ್ಕೆ ಸಾರಿದ ವಿಶಾಲ ದೃಷ್ಟಿತ್ವದ ಬ್ರಹ್ಮಶ್ರೀ ನಾರಾಯಣಗುರು ಅವರ ಸಂದೇಶ ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗಿದೆ ಎಂದು ಜೆಸಿಬಿಎಂ ಕಾಲೇಜಿನ ಪ್ರೊ. ಬಿ.ಆರ್.ನಾಗಭೂಷಣ್ ತಿಳಿಸಿದರು.

ಮಂಗಳವಾರ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿದ್ದ ಕಂದಾಚಾರಗಳು, ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು. ಮನುಷ್ಯ ಜಾತಿಯಿಂದ ಎಂದಿಗೂ ದೊಡ್ಡವನಾಗುವುದಿಲ್ಲ. ಬದಲಾಗಿ ಬದುಕಿನಲ್ಲಿ ರೂಢಿಸಿಕೊಂಡ ನೀತಿಯಿಂದ ಶ್ರೇಷ್ಠನಾಗಲು ಸಾಧ್ಯ. ಸರ್ವರನ್ನೂ ನಾವು ಅಂತರಂಗದಿಂದ ಪ್ರೀತಿಸಬೇಕು. ಕೀಳರಿಮೆಯಿಂದ ಸಮಾಜದ ಉನ್ನತೀಕರಣ ಕುಸಿಯುತ್ತದೆ ಎಂದು ಸಾರಿದ್ದರು. ವಿಶ್ವಮಾನವ ಸಂದೇಶವನ್ನು ದೇಶದೆಲ್ಲೆಡೆ ಸಾರಲು ಶ್ರಮಿಸಿದ ಆಧ್ಯಾತ್ಮಿಕ ಗುರು ಎಂದು ಬಣ್ಣಿಸಿದರು.
ಆರ್ಯ ಈಡಿಗರ ಸಂಘ ಅಧ್ಯಕ್ಷ ಎ.ಆರ್.ನಾರಾಯಣ ಮಾತನಾಡಿ, ದಾರ್ಶನಿಕರ ಜಯಂತಿಯನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಬಾರದು. ದಾರ್ಶನಿಕರು ಜಗತ್ತಿಗೆ ಕೊಟ್ಟ ಸಂದೇಶಗಳು ಯುವಪೀಳಿಗೆಗೆ ತಲುಪಬೇಕು. ಶಾಲಾ ಕಾಲೇಜುಗಳಲ್ಲಿ ಜಯಂತಿಗಳನ್ನು ಆಚರಿಸುವ ಉದ್ದೇಶವನ್ನು ಆಚರಣಾ ಸಮಿತಿ ಮುಂಬರುವ ದಿನಗಳಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದರು.
ನಿವೃತ್ತ ಶಿಕ್ಷಕ ಜನಾರ್ದನ ಮಂಡಗಾರು ಮಾತನಾಡಿ, ನುಲಿಯ ಚಂದಯ್ಯ ಸತ್ಯ, ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚ್ಛಂದವಾಗಿರಬೇಕು ಎಂದು ವಚನದ ಮೂಲಕ ಹೇಳಿ ಅಂತರಂಗವು ಶುದ್ಧತೆಯಿಂದ ಕೂಡಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದ್ದರು. ನುಲಿಯ ಚಂದಯ್ಯ ಕಾಯಕದ ಮೌಲ್ಯ ಎತ್ತಿಹಿಡಿದ ಸರಳ ವ್ಯಕ್ತಿತ್ವದ ದಾರ್ಶನಿಕ ಎಂದರು.
ತಹಸೀಲ್ದಾರ್ ಗೌರಮ್ಮ, ಶಿರಸ್ತೇದಾರ್ ಪ್ರವೀಣ್‌ಕುಮಾರ್, ಅಧಿಕಾರಿ ಅನಿಲ್, ಬಿಲ್ಲವರ ಸಂಘದ ಅಧ್ಯಕ್ಷ ಕೆ.ಎಂ.ಭಾಸ್ಕರ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net