

ಇಳಕಲ್ಲ(ಗ್ರಾ): ಡಾ.ಮಹಾಂತ ಶ್ರೀಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಅನೇಕ ವ್ಯಸನಿಗಳು ಕುಡಿತದ ಚಟದಿಂದ ಹೊರಬರುವಂತೆ ಮಾಡಿ ಹಲವು ಕುಟುಂಬಗಳಿಗೆ ಬೆಳಕಾದ ಶ್ರೀಗಳ ಹುಟ್ಟಿದ ದಿನವನ್ನು ರಾಜ್ಯ ಸರ್ಕಾರ ವ್ಯಸನಮುಕ್ತ ದಿನವಾಗಿ ಆಚರಿಸುತ್ತಿರುವುದು ಸಂತಸದ ವಿಷಯ ಎಂದು ಶಿರೂರ ನಿಸರ್ಗ ಕೇಂದ್ರದ ಸಂಚಾಲಕ ಡಾ.ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ನಡೆದ ಡಾ.ಮಹಾಂತ ಶ್ರೀಗಳ ಜನ್ಮದಿನ-ವ್ಯಸನಮುಕ್ತ ದಿನಾಚರಣೆಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಜನರನ್ನು ತಪ್ಪು ದಾರಿಯಿಂದ ಸರಿ ದಾರಿಗೆ ತರುವಲ್ಲಿ ಕೆಲಸ ಮಾಡಿದವರಲ್ಲಿ ಡಾ. ಮಹಾಂತ ಶ್ರೀಗಳು ಒಬ್ಬರು ಎಂದರು. ಯುವಜನತೆ ದುಶ್ಚಟ ಎಂಬ ಚಕ್ರವ್ಯೆಹಕ್ಕೆ ಒಮ್ಮೆ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟಸಾಧ್ಯ. ಕೆಲವರು ಚಿಕಿತ್ಸೆ ಪಡೆದರೆ ಪೂರ್ಣ ಪ್ರಮಾಣದಲ್ಲಿ ಸದಢರಾಗುವುದಿಲ್ಲ ಎಂದು ಹೇಳಿದರು.
ಲಿಂಗಸಗೂರ ಸಿದ್ದಲಿಂಗ ಸ್ವಾಮಿಗಳು ,ಸಿದ್ದಯ್ಯನಕೋಟೆ ಸ್ವಾಮಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರದ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು,ಶಿಕ್ಷಕಿಯರು ಮತ್ತು ಶಾಲಾ ಕಾಲೇಜಿನ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಶಿರೂರ ನಿಸರ್ಗ ಕೇಂದ್ರದ ಸಂಚಾಲಕ ಡಾ.ಬಸವಲಿಂಗ ಮಹಾಸ್ವಾಮಿಗಳು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.