

ಚಿಕ್ಕೋಡಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೀಡಸೋಸಿ ಶ್ರೀಗಳಿಗೆ ನೀಡಿರುವ ಗೌರವ ಡಾಕ್ಟರೇಟ್ ಪ್ರಶಸ್ತಿ ಇಡೀ ಸಮಾಜಕ್ಕೆ ಸಂದ ಗೌರವವಾಗಿದೆ. ಡಾಕ್ಟರೇಟ್‌ನಿಂದ ಅವರ ವೈಯಕ್ತಿಕ ಗೌರವ ಅಷ್ಟೇ ಅಲ್ಲದೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಹೆಚ್ಚಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಶ್ರೀಸಂಪಾದನಾ ಚರಮೂರ್ತಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಿಡಸೋಸಿ ಶ್ರೀಗಳಿಗೆ ಸಂದ ಗೌರವ ಡಾಕ್ಟರೇಟ್ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಿಡಸೋಸಿ ಶ್ರೀಮಠಕ್ಕೆ 36 ವರ್ಷಗಳ ಕಾಲ ಪೀಠಾಧಿಕಾರಿಗಳಾಗಿ ಸಮಾಜದಲ್ಲಿ ಒಬ್ಬ ಧರ್ಮಗುರು ಹೇಗಿರಬೇಕು, ಧರ್ಮ ಬೋಧನೆ, ಜನರಲ್ಲಿ ಮೌಢ್ಯತೆಯನ್ನು ಹೇಗೆ ಹೊರಹಾಕಬೇಕು, ಸೀ ಸಮಾನತೆ ಹಾಗೂ ಬಸವಣ್ಣನವರ ಹೇಳಿಕೊಟ್ಟ ಕಾಯಕ, ದಾಸೋಹ ಪರಂಪರೆಯಲ್ಲಿಯೇ ಸಮಾಜವನ್ನು ಮುನ್ನಡೆಸುವ ಕಾರ್ಯ ಮಾಡಿದ್ದಾರೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಭಕ್ತರನ್ನು ಹೊಂದಿರುವ ನಿಡಸೋಸಿ ಶ್ರೀಮಠ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಹಾಗೂ ಸಮಾಜದಲ್ಲಿನ ಮೌಢ್ಯತೆಯನ್ನು ಹೋಗಲಾಡಿಸಲು ತಮ್ಮದೇ ಆದ ಸೇವೆ ಸಲ್ಲಿಸಿರುವ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಂದಿರುವುದು ಹೆಮ್ಮೆಯ ವಿಷಯ ಎಂದರು.
ಅಭಿನಂದನೆ ಸ್ವೀಕರಿಸಿ ನಿಡಸೋಸಿ ಸಿದ್ಧಸಂಸ್ಥಾನಮಠದ ಡಾ.ಮನ್ನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಠದ ಧರ್ಮಾಧಿಕಾರಿಯಾಗಿ ದೇವದಾಸಿ ಪದ್ಧತಿ ಹೋಗಲಾಡಿಸಲು ಸುಮಾರು 5 ಸಾವಿರ ಮಹಿಳೆಯರನ್ನು ಪರಿವರ್ತನೆ ಮಾಡಲು ಬೃಹತ್ ವೇದಿಕೆಯಲ್ಲಿ ಬಳೆ ಒಡೆಯುವ ಪದ್ಧತಿ, ಜಡೆ ತೆಗೆಯುವ ಪದ್ಧತಿ ಹೋಗಲಾಡಿಸಲು ಹಾಗೂ ಶ್ರೀಮಠದ ಪರಿಸರದಲ್ಲಿ ಗ್ರಾಮೀಣ ಭಾಗದಲ್ಲಿಯೇ ಅತ್ಯುನ್ನತ ಇಂಜಿನಿಯರಿಂಗ್ ಕಾಲೇಜು ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸಮರ್ಪಕವಾಗಿ ನಡೆಸುವುದರ ಜತೆಗೆ ಸಾವಯವ ಕೃಷಿಯಲ್ಲಿ ಮಾಡಿದ ಸಾಧನೆ ಹಾಗೂ ಸಮಾಜ ಸೇವೆ ಗುರುತಿಸಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿರುವುದು ಗೌರವ ಡಾಕ್ಟರೇಟ್ ಅದು ಶ್ರೀಮಠದ ಭಕ್ತರಿಗೆ ಸಲ್ಲುತ್ತದೆ ಎಂದರು.
ಸುಭಾಷ ಕವಲಾಪುರೆ, ಎನ್.ಎಸ್.ವಂಟಮುತ್ತೆ, ಪ್ರಭು ಬೆಲ್ಲದ, ವಿಜಯ ಕಿಲ್ಲೇದಾರ, ಸಂಗಪ್ಪ ಹಂಪಣ್ಣವರ, ಸಂಜಯ ಹಿರೇಮಠ, ಶಿವಾನಂದ ಚೊಣ್ಣದ, ರಮೇಶ ಕುಡತರಕರ, ಮಲ್ಲಿಕಾರ್ಜುನ ಕವಟಗಿಮಠ, ಚಂದ್ರಶೇಖರ ಅರಭಾಂವಿ, ಡಾ.ಜಯಶ್ರೀ ನಾಗರಳ್ಳಿ, ರೋಹಿನಿ ಮಿರ್ಜೆ. ಡಾ.ಸುರೇಶ ಉಕ್ಕಲಿ, ಸುಭಾಸ ಸಂಕಪಾಳ ಇತರರಿದ್ದರು.