

ಸಿರಗುಪ್ಪ: ಆಳವಾದ ಧ್ಯಾನ, ಆತ್ಮ ಸಾಕ್ಷಾತ್ಕಾರ ಸಾಧಿಸುವ ಪ್ರಯತ್ನವೇ ತಪಸ್ಸು ಎಂದು ಸಿಂಧನೂರಿನ ವಳಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಗಡಿ ಆಂಧ್ರಪ್ರದೇಶದ ಆದೋನಿ ನಗರದ ಬಾಳೆಕೊಳದ ಶ್ರೀಮಠದ ಬಸವಲಿಂಗ ಶ್ರೀಗಳು ಕೈಗೊಂಡಿದ್ದ 21 ದಿನಗಳ ತಪೋನುಷ್ಠಾನ ಮಂಗಲ ಮಹೋತ್ಸವ ಮತ್ತು ಧಾರ್ಮಿಕ ಚಿಂತನಾಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಿಶ್ವಶಾಂತಿ, ಲೋಕಕಲ್ಯಾಣಾರ್ಥ ಶ್ರೀಗಳ ಕೈಗೊಂಡ ತಪಸ್ಸು, ಪರಮೋನ್ನತಿಗಾಗಿ ನಡೆಸಿದ ಪ್ರಸ್ತುತ ಅನುಷ್ಠಾನ ಭಕ್ತರಲ್ಲಿ ಒಮ್ಮತ ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ ಎಂದರು. ಗಡಿನಾಡ ಸಾಹಿತಿ ನಾ.ಮ. ಮರುಳಾರಾಧ್ಯ ಮಾತನಾಡಿದರು. ಮದಿರೆ ಪಾರ್ವತಮ್ಮ, ಶ್ರೀಕಂಠಯ್ಯಸ್ವಾಮಿ ಕುಟುಂಬ, ಆದೋನಿ ಭಕ್ತ ಮಂಡಳಿಯವರು ಸಿದ್ಧಲಿಂಗ ಸ್ವಾಮಿಗಳ ತುಲಾಭಾರ ಸೇವೆ ನೆರವೇರಿಸಿದರು.
ಕರ್ನಾಟಕದ ವಿವಿಧ ಮಠಾಧೀಶರಾದ ಗುರುಬಸವ ಸ್ವಾಮೀಜಿ, ಅಭಿನವ ಮಹಾಂತ ಸ್ವಾಮೀಜಿ, ಮರಿರಾಚೋಟಿ ಸ್ವಾಮೀಜಿ, ಮಹಲಿಂಗ ಸ್ವಾಮೀಜಿ, ಮಹಾಂತಲಿಂಗ ಸ್ವಾಮೀಜಿ, ಪಂಚಮ ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಬಸವಭೂಷಣ ಸ್ವಾಮೀಜಿ, ಚಂದ್ರಶೇಖರ ದೇವರು ಇತರರಿದ್ದರು.