

ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು.
ಅಧ್ಯಾಪಕ ಗೋವಿಂದರಾಜು ಮಾತನಾಡಿ, ಸಮಾನತೆಗಾಗಿ ಪ್ರತಿಭಟನೆ ದಾಖಲಿಸಿದ ಕಲಿ ಎನ್ನ್ನುವುದನ್ನು ಕನಕದಾಸರು ತಿಳಿಸಿಕೊಟ್ಟರು. ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ನೀಡದಿದ್ದಾಗ ಅನುಯಾಯಿಗಳು, ಕನಕದಾಸರ ಜತೆ ನಿಂತು ಪ್ರತಿಭಟನೆ ನಡೆಸಿದರು. ಹಾಗಾಗಿ ಪರಿಹಾರವಾಗಿ ಕಿಂಡಿಯ ಮಾರ್ಗ ಬಂದಿತು. ಇದು ಕನಕರ ಹೋರಾಟಕ್ಕೆ ಸಂದ ಗೆಲುವು. ಅಷ್ಟೇ ಅಲ್ಲ, ಸಮಾನತೆಗಾಗಿ ಮಿಡಿಯುವ ಎಲ್ಲ ಮನಸುಗಳ ಜಯ ಎಂದು ಹೇಳಿದರು.
ಶೈಕ್ಷಣಿಕವಾಗಿ ಅಲ್ಲದೆ, ಕ್ಷತ್ರಿಯ ವಿದ್ಯೆಗಳಲ್ಲಿಯೂ ಪಾಂಡಿತ್ಯ ಹೊಂದಿದ್ದ ಕನಕರು, ಸಮ ಸಮಾಜದ ಕನಸು ಹೊಂದಿದ್ದರು. ಸ್ತ್ರೀ ಸ್ವಾತಂತ್ರ್ಯ ಅವರ ಆಶಯವಾಗಿತ್ತು. ಜತೆಗೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯ ಅವರ ಕೀರ್ತನೆಗಳಲ್ಲಿ ಕಾಣುತ್ತೇವೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಡಾ. ಎಂ.ಅಬ್ದುಲ್ ರಹಿಮಾನ್ ಮಾತನಾಡಿ, ಸಂಸಾರಿಯಾಗಿ ದೈವ ಕೃಪೆಗೆ ಪಾತ್ರರಾಗಿ ಎಂಬ ಸಂದೇಶ ಕನಕದಾಸರದ್ದು. ಕುಲ ಕುಲವೆನ್ನುತ್ತಿರುವ ಕುಲ ವ್ಯಾಮೋಹಿಗಳಿಗೆ ಕುಲದ ನೆಲೆಯಲ್ಲಿ ಜನರನ್ನು ಅಳೆಯಬಾರದು ಎಂಬ ಎಚ್ಚರಿಕೆ ಸಂದೇಶವನ್ನು ತಮ್ಮ ಕೀರ್ತನೆ ಮೂಲಕ ನೀಡಿದ್ದಾರೆ. ಭಕ್ತಿ ಮಾರ್ಗದ ಮೂಲಕ ಜಾತಿರಹಿತ ಸಮಾಜ ನಿರ್ಮಾಣಕ್ಕೆ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ ಎಂದರು
ಕಾಲೇಜಿನ ಸಾಂಸ್ಕೃತಿಕ ಸಮಿತಿ ಖಜಾಂಚಿ ಡಾ.ಜಿ.ಎಲ್.ಬಸವರಾಜು, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ.ಎಚ್.ಜೆ.ಭೀಮೇಶ್, ವಿವಿಧ ವಿಭಾಗಗಳ ಪ್ರೊ.ಶಿವಲಿಂಗಸ್ವಾಮಿ, ಕೆ.ಎಸ್.ಮಂಜುನಾಥ, ಡಾ.ತೋಯಜಾಕ್ಷ, ಪಿ.ಆರ್. ವನಿತಾ, ವಿಂದುವಾಹಿನಿ ಇತರರು ಇದ್ದರು.