

ಕೆಜಿಎಫ್ : ದೇಶದಲ್ಲಿ ಅನೇಕ ಪ್ರಸಿದ್ಧ ತತ್ವಜ್ಞಾನಿಗಳು ಜನಿಸಿದ್ದು, ಅವರಲ್ಲಿ ಅಜರಾಮರರಾಗಿ ಉಳಿದಿರುವ ಪ್ರಮುಖರಲ್ಲಿ ಶಂಕರಾಚಾರ್ಯರು ಒಬ್ಬರು. ಸನಾತನ ಧರ್ಮಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಶಂಕರ ಮಠದ ಕಾರ್ಯದರ್ಶಿ ಎಸ್.ನಾರಾಯಣಮೂರ್ತಿ ಹೇಳಿದರು.
ನಗರದ ಶ್ರೀ ಶಂಕರ ಮಠದಲ್ಲಿ ಶಂಕರ ಸೇವಾ ಮಂಡಳಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 1237ನೇ ಶಂಕರ ಜಯಂತಿಯಲ್ಲಿ ಮಾತನಾಡಿದ ಅವರು, ಆ ಕಾಲದ ಶ್ರೇಷ್ಠ ಋಷಿಗಳಲ್ಲಿ ಒಬ್ಬರಾಗಿದ್ದ ಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಇಡೀ ಭರತ ಖಂಡ ಸುತ್ತುವ ಮೂಲಕ ಹಿಂದು ಧರ್ಮ ಪ್ರಚಾರ ಕೈಗೊಂಡ ಮಹಾನ್ ಸಂತರಾಗಿದ್ದಾರೆ ಎಂದರು.
ನೆರೆಯ ಕೇರಳದ ಕಾಲ್ನಡಿಯಲ್ಲಿ 8ನೇ ಶತಮಾನದಲ್ಲಿ ಜನಿಸಿದ ಶಂಕರ್ ಭಗವದ್ಪಾದರು ಕೇವಲ 32ನೇ ವರ್ಷಕ್ಕೆ ಹಿಮಾಲಯದಲ್ಲಿ ಅಸ್ತಂಗತರಾದರು. 8ನೇ ವಯಸ್ಸಿನಲ್ಲಿ ವೇದ, ಪುರಾಣ, ಉಪನಿಷತ್ತು, ರಾಮಾಯಣ, ಮಹಾಭಾರತ ಸೇರಿ ಎಲ್ಲ ಗ್ರಂಥಗಳನ್ನು ಕಂಠಪಾಠ ಮಾಡಿದ್ದರು. 16 ಮತ್ತು 32ರ ವಯಸ್ಸಿನಲ್ಲಿ ಇಡೀ ದೇಶವನ್ನೇ ಸುತ್ತಿದ್ದರು. ಪ್ರಯಾಣದ ಸಮಯದಲ್ಲಿ ವೇದಗಳ ಸಂದೇಶವನ್ನು ಜನರನ್ನು ತಲುಪುವಂತೆ ಮಾಡಿದರು. ಹಿಂದು ಧರ್ಮದ ಗ್ರಂಥಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದರಿಂದ ಮತ್ತು ಅವರ ಬೋಧನೆಗಳು ಪ್ರಪಂಚದಾದ್ಯಂತ ಜನರಿಗೆ ಇಂದಿಗೂ ಸ್ಫೂರ್ತಿಯ ಮೂಲವಾಗಿದೆ. ಆದಿ ಶಂಕರರು 18 ಭಾಷೆ ಗ್ರಂಥಗಳು, 22 ಪ್ರಕರಣ ಗ್ರಂಥಗಳು, 22 ಧ್ಯಾನ, ಪ್ರಾರ್ಥನಾ ಶ್ಲೋಕಗಳನ್ನು ರಚಿಸಿದ್ದಾರೆ.
ಕೆಲವು ಭಕ್ತಿ ಸ್ತೋತ್ರಗಳಲ್ಲಿ ಶಿವಾನಂದ ಲಹರಿ, ಸೌಂದರ್ಯ ಲಹರಿ, ನಿರ್ವಾಣ ಶಲ್ಕಂ ಮತ್ತು ಮನೀಶಾ ಪಂಚಕಂ ಸೇರಿವೆ. ಕೇವಲ 32 ವರ್ಷ ಬದುಕಿದ್ದ ಅವರು ಇಷ್ಟೊಂದು ಗ್ರಂಥಗಳನ್ನು ರಚಿಸಲು ಹೇಗೆ ಸಾಧ್ಯವಾಯಿತು ಎಂಬುದು ವಿದ್ವಾಂಸರಿಗೆ ಇಂದಿಗೂ ಅಚ್ಚರಿಯಾಗಿಯೇ ಉಳಿದಿದೆ. ದೇಶದ ಪೂರ್ವದಲ್ಲಿ ಗೋವರ್ಧನ, ಜಗನ್ನಾಥಪುರಿ (ಒರಿಸ್ಸಾ), ಪಶ್ಚಿಮದಲ್ಲಿ ದ್ವಾರಕಾ, ಶಾರದಾ ಮಠ (ಗುಜರಾತ್), ಉತ್ತರದಲ್ಲಿ ಜ್ಯೋತಿರ್ಮಠ, ಬದರಿಧಾಮ (ಉತ್ತರಾಖಂಡ), ದಕ್ಷಿಣದಲ್ಲಿ ರಾಮೇಶ್ವರಂ, ಕರ್ನಾಟಕದ ಶೃಂಗೇರಿ ಮಠ ಸೇರಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಹಿಂದು ಧರ್ಮದ ಸಾರವನ್ನು ಪ್ರಚಾರ ಮಾಡಿದರು ಎಂದರು. ಶಂಕರ ಜಯಂತಿ ಪ್ರಯುಕ್ತ ಆದಿ ಶಂಕರಾಚಾರ್ಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕ ಏಕವಾರ ರುದ್ರಾಭಿಷೇಕ, ವೇದ ಪಾರಾಯಣ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.