

ವಿಜಯಪುರ: ಧೃವ ಒಂದು ತಾರೆಯಾಗಲು, ಪ್ರಹ್ಲಾದನು ಭಕ್ತ ಪ್ರಹ್ಲಾದನಾಗಲು ಪ್ರೇರಣೆಯಾಗಿದ್ದೇ ನಾರದ ಮುನಿ. ನಾರದ ಮುನಿಗಳು ಅನೇಕರ ಬದುಕನ್ನೇ ಉದ್ಧಾರಗೊಳಿಸಿದವರು ಎಂದು ಡಾ.ಸಂಜೀವ ಜೋಶಿ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ನಾರದ ಜಯಂತಿ ಪ್ರಯುಕ್ತ ಮಂಥನ ವಿಜಯಪುರ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸಗೋಷ್ಠಿಯಲ್ಲಿ ಅವರು ತಮ್ಮ ವಿಚಾರ ಪ್ರತಿಪಾದಿಸಿದರು.
ನಾರದ ಮುನಿ ಎಂದರೆ ಈ ವಿಷಯ ಅಲ್ಲಿಗೆ, ಅಲ್ಲಿನ ವಿಷಯ ಇಲ್ಲಿಗೆ ಹೇಳುತ್ತಾರೆ ಎಂಬುದು ಪ್ರಚಲಿತದಲ್ಲಿದೆ. ಆದರೆ, ಬುದ್ದಿವಾದದ ಮೂಲಕ ಲೋಕೋದ್ದಾರ ಮಾಡಿದ ಶ್ರೇಯಸ್ಸು ನಾರದರಿಗೆ ಸಲ್ಲುತ್ತದೆ. ಧೃವ ಕಾಡಿನಲ್ಲಿ ಅಲೆದಾಡುತ್ತಿರುವಾಗ ಅವನಿಗೆ ಓಂ ನಮೋ ಭಗವತೇ ವಾಸುದೇವಾಯಃ ನಮಃ ಎಂಬ ಕಾರಣ ಆತ ಧೃವತಾರೆಯಾಗಲು ಕಾರಣವಾಯಿತು. ಅದೇ ತೆರನಾಗಿ ಪ್ರಹ್ಲಾದನಲ್ಲಿ ಅದಮ್ಯ ಭಕ್ತಿ ಪ್ರವಹಿಸುವಂತೆ ಮಾಡಿ ಅವನನ್ನು ಭಕ್ತ ಪ್ರಹ್ಲಾದವನ್ನಾಗಿ ಮಾಡಿದ್ದು ಸಹ ನಾರದರೇ ಎಂದರು.
ಧರ್ಮದ ಪರವಾಗಿ ನಾರದರು ಸದಾ ಇದ್ದರು. ನದಿ, ಗಿಡಮರಗಳಂತೆ ನಾರದರು ತಮಗಾಗಿ ಎಂದೂ ಬದುಕಲಿಲ್ಲ ಎಂದರು.
ಗಾಲಬ ಋಷಿಗಳು ಸೂರ್ಯ ನಮಸ್ಕಾರ ಮಾಡುವ ಸಂದರ್ಭದಲ್ಲಿ ಗಂಧರ್ವನೋರ್ವ ತಾಂಬೂಲ ತಿಂದು ಅದರ ಉಗುಳು ಋಷಿಗಳ ಪವಿತ್ರ ಅಂಜನಿಯಲ್ಲಿ ಬೀಳುತ್ತದೆ, ಆಗ ಋಷಿಗಳು ಈ ವಿಷಯವನ್ನು ಕೃಷ್ಣನ ಗಮನಕ್ಕೆ ತರುತ್ತಾರೆ, ಈ ವಿಷಯವಾಗಿ ಗಂಧರ್ವ ಪಶ್ಚಾತ್ತಾಪ ಪಡುವುದು ಗೊತ್ತಾಗುತ್ತದೆ, ನಾರದರು ಉಪಾಯದ ಮೂಲಕ ದ್ರೌಪದಿಗೆ ಆ ಗಂಧರ್ವನಿಗೆ ಅಭಯ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಈ ರೀತಿ ಅನೇಕರಿಗೆ ಶಾಪಮುಕ್ತರನ್ನಾಗಿ ಮಾಡಿದ ಶ್ರೇಯಸ್ಸು ನಾರದ ಮುನಿಗಳಿಗೆ ಸಲ್ಲುತ್ತದೆ ಎಂದರು.
ಕಂಸನಂತಹ ರಾಕ್ಷಸನ ಪಾಪದ ಕೊಡ ತುಂಬಲಿ, ಆತ ಸಹ ನಾರಾಯಣನ ಪಾದ ಸೇರಲಿ ಎಂಬ ಆಶಯ ನಾರದ ಮುನಿಯಲ್ಲಿತ್ತು ಎಂದರು.
ನಾರದ ಮುನಿಗಳ ಜೀವನ ಅಧ್ಯಯನ ಮಾಡಿ ಅವರ ಶ್ರೇಷ್ಠ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ನಾರದ ಮುನಿಗಳು ಭೂಮಿ, ಪಾತಾಳ, ಸ್ವರ್ಗಲೋಕದ ವರದಿಗಾರರಾಗಿದ್ದರು. ಒಂದು ರೀತಿ ಸರ್ವವ್ಯಾಪಿಯಾಗಿದ್ದರು, ತ್ರಿಲೋಕದ ಸುವಾರ್ತೆ ನೀಡುತ್ತಿದ್ದ ನಾರದ ಮುನಿಗಳು ಒಬ್ಬ ಶ್ರೇಷ್ಠ ಹಾಗೂ ಆದ್ಯ ಪರ್ತಕರ್ತ ಎಂದರು.
ನಾರದ ಮುನಿ ಮನುಕುಲಕ್ಕೆ ಜ್ಞಾನ ಕೊಡುವ ಶ್ರೇಷ್ಠ ವ್ಯಕ್ತಿ. ನಾರದ ಮುನಿಗಳು 64 ವಿದ್ಯೆಗಳಲ್ಲಿ ಪಾರಂಗತವಾಗಿದ್ದರು ಎಂದರು.
ನಾರದ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತ ವಾಸುದೇವ ಹೇರಕಲ್, ಸಂಕೇತ ಬಗಲಿ, ಸಂಗನಗೌಡ ಪಾಟೀಲ, ರಘುತ್ತಮ್ ಅರ್ಜುಣಗಿ, ರಂಜೀತ ರಜಪೂತ, ಅಕ್ಷಯ ಪಶ್ಚಾಪೂರ, ಶ್ರೀನಿವಾಸ ಗುಜ್ರಾಲ, ಸಂತೋಷ ಕಳ್ಳಿಗುಡ್ಡ, ವಿನೋದಕುಮಾರ ಮಣೂರ ಮತ್ತಿತರರಿದ್ದರು.