

ಜಗದೀಶ ಹೊಂಬಳಿ ಬೆಳಗಾವಿ
ಸಾಮಾಜಿಕ ಜಾಲತಾಣದಲ್ಲಿ ಕಳೆದು ಹೋಗಿರುವ ಇಂದಿನ ಮಕ್ಕಳಿಗೆ ಓದು, ಬರಹ ಎಂದರೆ ಅಲರ್ಜಿ ಎನ್ನುವಂತಾಗಿದೆ. ಇನ್ನೂ ಸಾಹಿತ್ಯ, ಕಥೆ, ಪುಸ್ತಕ ಎಂದರೆ ಸಾಕು ಮಾರುದ್ಧ ದೂರ ಹೋಗಿ ನಿಲ್ಲುತ್ತಾರೆ. ಆದರೆ, ಇಲ್ಲೊಬ್ಬ 10ನೇ ತರಗತಿ ವಿದ್ಯಾರ್ಥಿ ತನ್ನ ಓದಿನೊಂದಿಗೆ ಇಂಗ್ಲಿಷ್ ಕಾದಂಬರಿ ಬರೆದು ಎಲ್ಲರ ಗಮನ ಸೆಳೆದಿದ್ದಾನೆ.
ಪೀರನವಾಡಿಯ ಕೆಎಲ್‌ಎಸ್ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪ್ರಣವ್ ಬಯರಿ ಎಂಬಾತ ‘ದಿ ರಸ್ಟೆಡ್ ರಿಡಲ್’ ಎಂಬ ಇಂಗ್ಲಿಷ್ ಕಾಲ್ಪನಿಕ ನಾವೆಲ್ ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾನೆ. ಈತ ಬರೆದ ಕಾದಂಬರಿ ಅಮೆಜಾನ್, ಗೂಗಲ್ ಪ್ಲೇ ಸ್ಟೋರ್‌ನ ಇ-ಬುಕ್ ಸೇರಿ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಏಳು ತಿಂಗಳು ಕಾಲ ಪುಸ್ತಕ ಬರೆದಿರುವ ಈ ವಿದ್ಯಾರ್ಥಿಯು, ತಾನು ಪುಸ್ತಕ ಬರೆಯುವುದನ್ನು ಶಾಲೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟವಾಗ ತೊಡಗಿದಾಗ ಶಾಲೆಯಲ್ಲಿ ಶಿಕ್ಷಕರಿಗೆ ಗೊತ್ತಾಗಿದೆ.
460 ಪುಟಗಳ ಪುಸ್ತಕ: ಶಾಲೆಯ ತರಗತಿಯ ಅಭ್ಯಾಸದ ಜತೆಗೆ ಪ್ರತಿದಿನ 5-6 ಪುಟದಟ್ಟು ಕಾದಂಬರಿ ಬರೆಯುತ್ತಿದ್ದನಂತೆ. ಒಟ್ಟು 460 ಪುಟಗಳ ಪುಸ್ತಕವನ್ನು ಹೊರತಂದಿದ್ದಾನೆ. ಸದ್ಯ ಆನ್‌ಲೈನ್‌ಲ್ಲಿ ಲಭ್ಯವಿದ್ದು, ಇನ್ನೊಂದು ವಾರದಲ್ಲಿ ಮುದ್ರಣ ಪ್ರತಿ ಬಿಡುಗಡೆಯಾಗಲಿದೆ. ಇದು ವಿದ್ಯಾರ್ಥಿ ಬರೆಯುತ್ತಿರುವ ಸಿರೀಸ್ ಪುಸ್ತಕದ ಮೊದಲ ಪ್ರಕಟಣೆಯಾಗಿದ್ದು, ಪುಸ್ತಕದ ಮತ್ತೊಂದು ಸಿರೀಸ್ ಬರಲಿವೆ ಎಂದು ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ.
ಇಂಗ್ಲಿಷ್ ಪುಸ್ತಕ ಪ್ರೇರಣೆ: ಟಿಳಕವಾಡಿಯ 2ನೇ ರೈಲ್ವೆ ಗೇಟ್ ಬಳಿಯ ಅಗರಕರ ರಸ್ತೆಯಲ್ಲಿ ವಾಸವಿರುವ ಈ ವಿದ್ಯಾರ್ಥಿ ಸಣ್ಣ-ಪುಟ್ಟ ಬರವಣಿಗೆಗಳಲ್ಲಿ ತೊಡಗಿದ್ದ. ಲಂಡನ್‌ನ ಇಂಗ್ಲಿಷ್ ಲೇಖಕ ಜೆ.ಕೆ. ರಾಲಿಂಗ್ ಅವರ ‘ಹ್ಯಾರಿ ಪೋಟರ್’ ಎಂಬ ಪುಸ್ತಕ ಓದಿ ಈತ ಪ್ರೇರಣೆಗೊಂಡು ಪುಸ್ತಕ ಬರೆದಿದ್ದಾನೆ. ತಂದೆ ಕೆ.ಎಸ್. ಶಶಿಭೂಷಣ ಅವರು ಪಾರ್ಮಾಸ್ಯೂಟಿಕಲ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ವಿದ್ಯಾರ್ಥಿ ಬರೆದ ಕಾದಂಬರಿ ವಸ್ತು ವಿಷಯ ‘15 ವರ್ಷದ ಬಾಲಕನ ಪಾಲಕರ ಹತ್ಯೆ ಆಗಿರುತ್ತದೆ. ಹತ್ಯೆ ಯಾರು ಮಾಡಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆದು, ಸತ್ಯಾಸತ್ಯೆ ಹೊರ ತರುವುದು’ ಕಥಾವಸ್ತುವಾಗಿದೆ. ಆನ್‌ಲೈನ್‌ಲ್ಲಿ ಈ ಕಾದಂಬರಿ ಪುಸ್ತಕದ ಬೆಲೆ 375 ರೂ. ಇದೆ. ದಿನದಿಂದ ದಿನಕ್ಕೆ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿರು ಸಂದರ್ಭದಲ್ಲಿ ಈ ವಿದ್ಯಾರ್ಥಿ ಕಾದಂಬರಿಯನ್ನೇ ಬರೆದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾನೆ.
ಪುಸ್ತಕವನ್ನು ಅಮೆಜಾನ್ ಕಿಂಡಲ್ ಡೈರೆಕ್ಟ್ ಪಬ್ಲಿಕೇಷನ್ ವಿಭಾಗದಲ್ಲಿ ತಾನು ಬರೆದ ಪುಸ್ತಕವನ್ನು ವಿದ್ಯಾರ್ಥಿ ಅಪ್‌ಲೋಡ್ ಮಾಡಿದ್ದಾನೆ. ಅಮೆಜಾನ್‌ನಲ್ಲಿ ಪರಿಶೀಲನೆಗೊಂಡು ಪುರಸ್ಕೃತವಾಗಿದೆ. ಸದ್ಯ ನಾಲ್ಕು ಪ್ರತಿಗಳು ಮಾರಾಟವಾಗಿವೆ. ಪ್ರತಿಗಳು ಮಾರಾಟವಾದಂತೆ ವಿದ್ಯಾರ್ಥಿಗೆ ಅಮೆಜಾನ್, ಪ್ಲೇ ಸ್ಟೋರ್ ಇ-ಬುಕ್. ಪೋತಿ ಡಾಟ್ ಕಾಂ ನಿಂದ ಹಣ ಬರುತ್ತಿದೆ.
ಲಂಡನ್‌ನ ಇಂಗ್ಲಿಷ್ ಲೇಖರ ಜೆ.ಕೆ. ರಾಲಿಂಗ್ ಹ್ಯಾರಿ ಪೋಟರ್ ಪುಸ್ತಕದ ಎಂಟು ಭಾಗಗಳನ್ನು ಓದಿ ಪ್ರೇರಣೆಗೊಳಗಾಗಿ ನಾನು ಪುಸ್ತಕ ಬರೆದಿರುವೆ. ಈ ಪುಸ್ತಕ ಬರೆಯಬೇಕೆಂದು ಒಂದು ವರ್ಷದ ಹಿಂದೆ ಪ್ಲಾೃನ್ ಮಾಡಿದ್ದೆ. ಈಗ ಮುಂದಿನ ವರ್ಷ ಮತ್ತೊಂದು ಬಿಡುಗಡೆ ಮಾಡುತ್ತೇನೆ. ಶಾಲಾ ಓದಿಗೆ ಅಡೆತಡೆಯಾಗದಂತೆ ಪುಸ್ತಕ ಬರೆಯುತ್ತಿರುವೆ. ಪ್ರಣವ್ ಬಯರಿ, ಕಾದಂಬರಿ ಬರೆದ ವಿದ್ಯಾರ್ಥಿ