

ಕಲಘಟಗಿ: ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ನೀರಿನ ಹರಿವನ್ನೂ ಲೆಕ್ಕಿಸದೆ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ತಾಲೂಕಿನ ಬೇಡ್ತಿ ಹಳ್ಳದ ನೀರಲ್ಲಿ ಕೊಚ್ಚಿಹೋಗಿ ಪಡಬಾರದ ಕಷ್ಟಪಟ್ಟಿದ್ದಾನೆ. ಕೊನೆಗೆ ಮರದ ಬೇರಿನ ಆಸರೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಕಾಲಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡು ಜೀವ ಉಳಿಸಿದೆ.
ಕಲಘಟಗಿ ತಾಲೂಕಿನ ಬೇಗೂರು ಬಿಸರಳ್ಳಿ ಹಾಗೂ ಹಿರೇಹೊನ್ನಿಹಳ್ಳಿ ಗ್ರಾಮ ಸಂಪರ್ಕಿಸುವ ಮಧ್ಯಭಾಗದಲ್ಲಿರುವ ಬೇಡ್ತಿ ಸೇತುವೆ ಅತಿ ಕೆಳಮಟ್ಟದಲ್ಲಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ರಸ್ತೆಯ ಮೇಲೆಯೂ ಹರಿಯುತ್ತಿದೆ. ಪುಡಕಲಕಟ್ಟಿ ಗ್ರಾಮದ ನಾಗರಾಜ ದೇವಣ್ಣವರ ಎಂಬುವವರು ಬೇಗೂರು ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದು ಸೋಮವಾರ ಮರಳಿ ತಮ್ಮೂರಿಗೆ ಹೋಗುತ್ತಿದ್ದರು. ಬೇಡ್ತಿ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಹರಿವನ್ನೂ ಲೆಕ್ಕಿಸದೆ ಕಾರು ಚಲಾಯಿಸಿಕೊಂಡು ಹೋಗುವಾಗ ಸೆಳೆತಕ್ಕೆ ಸಿಲುಕಿ ಕಾರು ಸಹಿತ ಕೊಚ್ಚಿಕೊಂಡು ಹೋಗಿದ್ದಾರೆ.
ಕೂಡಲೆ ಕಾರಿನಿಂದ ಹೊರಜಿಗಿದು ಪಕ್ಕದಲ್ಲಿರುವ ಗಿಡದ ಬೇರಿನ ಸಹಾಯದಿಂದ ಗಿಡವನ್ನೇರಿ ಕೊಂಬೆ ಮೇಲೆ ಕುಳಿತು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಇದನ್ನ ಗಮನಿಸಿದ ಬಸವರಾಜ ದೇಸೂರ ರಂಬುವವರು ಸೋಮವಾರ ರಾತ್ರಿ 11: 30ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೆ ಘಟನಾ ಸ್ಥಳಕ್ಕೆ ಆಗಮಿಸಿದ ಕಲಘಟಗಿ ಅಗ್ನಿಶಾಮಕ ದಳದ ಸಿಬ್ಬಂದಿ 2 ಗಂಟೆ ಕಾರ್ಯಾಚರಣೆ ಕೈಗೊಂಡು ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಅಶೋಕ ವಡ್ಡರ, ಥಾವರು ರಾಠೋಡ, ಉಮೇಶ ತೆಂಬದ, ಎಸ್. ಕಿರಣಕುಮಾರ, ಮಹಾಂತೇಶ ಜೋಡಿಗೇರ, ಸಾಯಿರಾಮ ಸಿಂಧೆ, ನಿಖಿಲ್ ಎನ್. ಇತರರು ಇದ್ದರು.