ಸೋರುತ್ತಿಹವುದು ಮನೆಯ ಮಾಳಿಗೆ...

The roof of the house is leaking...
Published on

ಮಹಾಲಿಂಗಪುರ:ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಸ್ಥಾಪಿಸುವ ಕೇಂದ್ರವೇ ನೆಮ್ಮದಿ ಕೇಂದ್ರ. ಆದರೇ ಕಿಂಚಿತ್ತು ನೆಮ್ಮದಿ ಇಲ್ಲ. ಮಳೆ ಬಂದರೇ ಸಾಕು ಸೋರುತಿವುದು ಮನೆಯ ಮಾಳಿಗೆ, ನಡುಗುತ್ತಿದೆ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ...!!!ಪಟ್ಟಣದ ಗಾಂಧಿ ಸರ್ಕಲ್​ ಸಮೀಪ ಒಂದೇ ಸ್ಥಳದಲ್ಲಿರುವ ನೆಮ್ಮದಿ ಕೇಂದ್ರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದ ವಾಸ್ತವ ಚಿತ್ರಣವಿದು. ಈ ಸರ್ಕಾರಿ ಕಚೇರಿ, ಕಾರ್ಯಾಲಯದ ಪರಿಸ್ಥಿತಿ ನೋಡಿದರೇ ಸಾರ್ವಜನಿಕರಿಗೆ ಸಮರ್ಪಕ ಸೇವೆ ಹೇಗೆ ಸಾಧ್ಯ ಅಂತ ಪ್ರಶ್ನೆ ಮೂಡುತ್ತದೆ. ಎರಡು ಕಚೇರಿಗಳು ನೊರೆಂಟು ಸಮಸ್ಯೆ, ಸವಾಲುಗಳಿಂದ ಬಳಲಿ ಬೆಂಡಾಗಿ ಹೋಗಿವೆ.

ಸತತ ಸುರಿದ ಸಾಧಾರಣ ಮಳೆಯಿಂದ ಕಚೇರಿಗಳ ಮಾಳಿಗೆ ತೋಯ್ದು ತಂಪಾಗಿ ಹೋಗುತ್ತದೆ. ಕಚೇರಿ ಒಳಗೆ ಇರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಾರ್ವಜನಿಕರ ಸೇವೆ ಒದಗಿಸುವ ಚಿಂತೆಗ್ಗಿಂತ ಮಳೆ ಆಗದಿರಲಿ ಅಂತ ಆಕಾಶದತ್ತ ಮುಖಮಾಡಿ ಕುಳಿತುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಪಹಣಿ, ಉತಾರ, ಹಕ್ಕು ಬದಲಾವಣೆ, ಖಾತಾ ಪ್ರತಿ ನೀಡುವದು, ಭೂ ಪರಿವರ್ತನೆ, ಸರ್ಕಾರಿ ಜಮೀನಿನ ಅಕ್ರಮ&ಸಕ್ರಮ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಹತ್ತಾರು ಸೇವೆಗಳನ್ನು ಪಡೆಯಲು ನಿತ್ಯವು ನೂರಾರು ಜನರು ಆಗಮಿಸುತ್ತಾರೆ. ಕಚೇರಿ ಒಳಗೆ ಆವಾಂತರ ನೋಡಿದರೇ ಸಾರ್ವಜನಿಕರೇ ಗಾಬರಿ ಬೀಳುತ್ತಿದ್ದಾರೆ.

ನೆಮ್ಮದಿ ಕೇಂದ್ರದ ಪಕ್ಕದಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ಮಳೆಯಲ್ಲಿ ನೆನೆದು ನಡುಗುತ್ತಿರುವಂತೆ ಭಾಸವಾಗುತ್ತಿದೆ. ಇದರ ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿದೆ. ಯಾವೊಬ್ಬ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ಇರುವುದು ದುರಂತ ಸಂಗತಿ. ಮಹತ್ವ ದಾಖಲೆಗಳನ್ನು ಸಂರಕ್ಷಣೆ ಮಾಡುವುದು ಕೂಡಾ ದೊಡ್ಡ ಸವಾಲಿನ ಕೆಲಸವಾಗಿದೆ. ಆದರು ಸಹ ಜಾಣ ಕುರುಡುತನ ಎದ್ದು ಕಾಣುತ್ತಿದೆ. ಅಲ್ಲದೇ ಯಾವಾಗ ಬೇಕಾದರು ಮೇಲ್ಚಾವಣೆ ಬೀಳುವ ಲಕ್ಷಣ ಇದ್ದು, ಸಿಬ್ಬಂದಿಗಳು ಜೀವ ಭಯದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.

ಸರ್ಕಾರಗಳು ಅನೇಕ ವರ್ಷಗಳಿಂದ ಶೀಥಿಲಗೊಂಡ ಈ ಕಟ್ಟಡಗಳನ್ನು ವಿವಿಧ ಕಾರ್ಯಾಲಯಗಳಿಗಾಗಿ ಉಪಯೋಗಿಸುತ್ತಾ ಬಂದಿದೆ. ಈ ಹಿಂದೆ ಇದ್ದ ಗ್ರಂಥಾಲಯವನ್ನು ಇದೇ ಕಾರಣಕ್ಕೆ ಬೇರೆಡೆ ಸ್ಥಳಾಂತರಿಸಲಾಗಿದೆ. ಆದರೇ ನೆಮ್ಮದಿ ಕೇಂದ್ರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ಪರಿಸ್ಥಿತಿ ಗಂಭೀರವಾಗಿದ್ದರು ಸ್ಥಳಾಂತರ ಅಥವಾ ದುರಸ್ಥಿ ಭಾಗ್ಯ ಇಂದಿಗೂ ಸಾಧ್ಯವಾಗಿಲ್ಲ ಎನ್ನುವುದು ವಿಪರ್ಯಾಸ ಸಂಗತಿ. ಸರ್ಕಾರಿ ಕಚೇರಿ ಈ ದುಸ್ಥಿತಿ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಿ ಕಚೇರಿಗಳು ಮಾದರಿಯಾಗಿರಬೇಕು. ಆದರೇ ಮಹಾಲಿಂಗಪುರ ಪಟ್ಟಣದ ನೆಮ್ಮದಿ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ಪರಿಸ್ಥಿತಿ ನೋಡಿದರೇ ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ನಿತ್ಯವು ಭಯದಲ್ಲಿ ಸಾರ್ವಜನಿಕರು, ಸಿಬ್ಬಂದಿಗಳು ಕಚೇರಿ ಒಳಗೆ ಇರಬೇಕು. ಇಲ್ಲವಾದಲ್ಲಿ ಯಾವಾಗ ಅವಡ ಸಂಭವಿಸುತ್ತದೆ ಎನ್ನುವುದೇ ಅರಿವಿಗೆ ಬರುವದಿಲ್ಲ.

ವಿರೇಶ ಆಸಂಗಿ ಪಟ್ಟಣದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net