

ಇಳಕಲ್ಲ (ಗ್ರಾ): ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮನೆಯ ಛಾವಣಿ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಗ್ರಾಮದ ಗೀತಾ ಈಶ್ವರಯ್ಯ ಆದಾಪೂರಮಠ(12), ತಮ್ಮ ರುದ್ರಯ್ಯ ಈಶ್ವರಯ್ಯ ಅದಾಪೂರಮಠ (10) ಮೃತಪಟ್ಟವರು.
ಘಟನೆ ವಿವರ: ಮನೆಯಲ್ಲಿ ಅಕ್ಕ ಗೀತಾ, ತಮ್ಮ ರುದ್ರಯ್ಯ ಹಾಗೂ ಅಜ್ಜಿ, ಅಜ್ಜ ಇದ್ದರು. ಅಷ್ಟರಲ್ಲೇ ಅಜ್ಜ ಯಾವುದೇ ಕೆಲಸಕ್ಕೆ ಹೊರಗಡೆ ತೆರಳಿದ್ದರು. ಅಜ್ಜಿಯೂ ಮನೆಯ ಹೊರಗಡೆ ಕುಳಿತಿದ್ದರು. ಆದರೆ, ಅಕ್ಕ-ತಮ್ಮ ಆಟವಾಡುತ್ತ ಮನೆಯಲ್ಲಿ ಕುಳಿತಿದ್ದರು. ಏಕಾ ಏಕಿ ಮನೆಯ ಛಾವಣಿ ಕುಸಿದು ಬಿದ್ದಿದ್ದರಿಂದ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಕುರಿತು ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಮಲ್ಲು ಸತ್ತಿಗೌಡರ ತನಿಖೆ ನಡೆಸಿದ್ದಾರೆ. ಇಳಕಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಶವಪರೀಕ್ಷೆ ನಡೆಸಲಾಯಿತು.
ಸ್ಥಳಕ್ಕೆ ತಹಸೀಲ್ದಾರ್ ಸತೀಶ ಕೂಡಲಗಿ, ತಾಪಂ ಇಒ ಮುರಳೀಧರ ದೇಶಪಾಂಡೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸರ್ಕಾರದಿಂದ ಸಿಗುವ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಶಾಸಕರ ಭೇಟಿ: ಘಟನಾ ಸ್ಥಳಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ, ಮೃತ ಮಕ್ಕಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.