ಮನೆ ಛಾವಣಿ ಕುಸಿದು ವೃದ್ಧೆ ಸಾವು; ಬೆಳಗ್ಗೆ 9 ಗಂಟೆಯಾದರೂ ಅಕ್ಕಪಕ್ಕದ ಮನೆಯವರಿಗೇ ವಿಚಾರ ತಿಳಿಯಲಿಲ್ಲ!

29-RNR-03A
Published on

ರಾಣೆಬೆನ್ನೂರ: ಮನೆ ಛಾವಣಿ ಕುಸಿದು ಬಿದ್ದು ವೃದ್ಧೆಯೊಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ತಾಲೂಕಿನ ಮೈದೂರು ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.

ಸುಶೀಲಮ್ಮ ಹನುಮಂತಪ್ಪ ಕುದರಿಹಾಳ (62) ಮೃತಪಟ್ಟ ವೃದ್ಧೆ. ಸುಶೀಲಮ್ಮ ಅವರಿಗೆ ಒಬ್ಬ ಪುತ್ರ, ಆರು ಪುತ್ರಿಯರು ಇದ್ದಾರೆ. ಪತಿ ಮೊದಲೇ ಮೃತಪಟ್ಟಿದ್ದಾರೆ. ಸುಶೀಲಮ್ಮ ಎಲ್ಲ ಪುತ್ರಿಯರ ಮದುವೆ ಮಾಡಿಕೊಟ್ಟಿದ್ದಾರೆ. ಪುತ್ರ ನಗರದ ಬಾರ್ ಆಂಡ್ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಸೋಮವಾರ ರಾತ್ರಿ ಬಾರ್​ನಲ್ಲೇ ಮಲಗಿದ್ದನು. ಸುಶೀಲಮ್ಮ ಮನೆಯ ಕೋಣೆಯಲ್ಲಿ ಮಲಗಿದ್ದರು. ಆದರೆ, ಅದೇ ಕೋಣೆಯ ಮೇಲಿನ ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಮಡಿಗೆ ಮನೆ ಆಗಿದ್ದರಿಂದ ವಿಪರೀತ ಮಣ್ಣು ಮೈಮೇಲೆ ಬಿದ್ದು ಸುಶೀಲಮ್ಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ದೊಡ್ಡದಾದ ಶಬ್ದ ಬಂದರೂ ಅಕ್ಕಪಕ್ಕದ ಜನತೆ ಏನಾದರೂ ಬಿದ್ದಿರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ, ಬೆಳಗ್ಗೆ 9 ಗಂಟೆಯಾದರೂ ಸುಶೀಲಮ್ಮ ಬಾಗಿಲು ತೆಗೆಯದಿದ್ದಾಗ ಮನೆ ಬಾಗಿಲು ಮುರಿದು ಒಳಗೆ ಹೋದಾಗ ಆಕೆ ಮೃತಪಟ್ಟ ವಿಚಾರ ತಿಳಿದಿದೆ. ಆಕೆ ಮಕ್ಕಳು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಪಿಎಸ್​ಐ ವಸಂತ, ತಹಸೀಲ್ದಾರ್ ಬಸನಗೌಡ ಕೋಟೂರ ಸ್ಥಳ ಪರಿಶೀಲಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net