

ಮಡಿಕೇರಿ: ಎಚ್.ಐ.ವಿ/ ಏಡ್ಸ್ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ ಅತೀ ಮುಖ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈಧ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಮಡಿಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಡಗು ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ಜಿಲ್ಲೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯುವ ದಿನಾಚರಣೆ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಚ್.ಐ.ವಿ ಮತ್ತು ಏಡ್ಸ್ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ ಅತೀ ಮುಖ್ಯವಾಗಿದೆ. ಆದ್ದರಿಂದ ತಮ್ಮನ್ನು ತಾವು ಎಚ್.ಐ.ವಿ ಬರದಂತೆ ತಡೆಗಟ್ಟಬೇಕು. ಎಚ್.ಐ.ವಿ ಕುರಿತು ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ ಅವರು, ಎಚ್.ಐ.ವಿ/ಏಡ್ಸ್ ಆಪ್ತ ಸಮಾಲೋಚನೆಯ ಮಹತ್ವ ಹಾಗೂ ಸೇವಾ ಸೌಲಭ್ಯಗಳಾದ ಐಸಿಟಿಸಿ, ಎ.ಆರ್.ಟಿ ಕೇಂದ್ರಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಂತರಾಷ್ಟೀಯ ಯುವ ದಿನಾಚರಣೆ-೨೦೨೪ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಅಂತರ್ಜಾಲ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಕಾವೇರಿ ಪಾಲಿಟೆಕ್ನಿಕ್ ಗೋಣಿಕೊಪ್ಪ ಕಾಲೇಜಿನ ದರ್ಶನ್ ಅಯ್ಯಪ್ಪ ಪ್ರಥಮ ಸ್ಥಾನ ಪಡೆದರೆ, ಗೋಣಿಕೊಪ್ಪದ ಕಾವೇರಿ ಪಾಲಿಟೆಕ್ನಿಕ್ ದಿಲನ್ ದ್ವಿತೀಯ ಸ್ಥಾನ ಹಾಗೂ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ದಿಗಂತ್ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್, ಜಿಲ್ಲಾ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ, ಶುಶ್ರೂಷಕ ಅಧಿಕಾರಿ ವೀಣಾ, ಆಡಳಿತಾಧಿಕಾರಿ ರೋೀಹಿಣಿ, ಬಿ.ಎಸ್.ಸಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ ಇತರರು ಇದ್ದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಿ.ಎಸ್.ಸಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಪ್ರಾರ್ಥಿಸಿ, ವಿದ್ಯಾರ್ಥಿ ಚಿದಾನಂದ್ ಸ್ವಾಗತಿಸಿದರೆ, ವಿದ್ಯಾರ್ಥಿನಿ ನಿಧಿ ನಿರೂಪಿಸಿ, ವಿದ್ಯಾರ್ಥಿ ಹರ್ಷಿತ್ ವಂದಿಸಿದರು.