

ಸಿಂಧನೂರು: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿ, ನಾಯಕತ್ವ ಗುಣ ಬೆಳೆಸುತ್ತದೆ ಎಂದು ಹೊಸಳ್ಳಿ (ಇಜೆ) ಗ್ರಾಪಂ ಉಪಾಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು.
ಇದನ್ನೂ ಓದಿ:ರಾಷ್ಟ್ರೀಯ ಸೇವಾ ಯೋಜನೆಯಿಂದ ಜ್ಞಾನ ವೃದ್ಧಿ
ತಾಲೂಕಿನ ಹೊಸಳ್ಳಿ (ಇಜೆ) ಗ್ರಾಮದಲ್ಲಿ ಸರ್ಕಾರಿ ಪದವಿ ಕಾಲೇಜಿನಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಸೇವಾ ಮನೋಭಾವ ಬೆಳೆಸಿಕೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ರಾಷ್ಟ್ರದ ಪ್ರಗತಿಯಲ್ಲಿ ಯುವ ಜನಾಂಗದ ಪಾತ್ರ ಮುಖ್ಯವಾಗಿದೆ. ನಗರ ಜೀವನದಲ್ಲಿ ಸಹಭಾಗಿತ್ವದ ಕೊರತೆ ಕಾಣುತ್ತೇವೆ. ಆಧುನಿಕತೆ ಗುಂಗಿನಲ್ಲಿ ಗ್ರಾಮೀಣ ಸೊಗಡು ಮರೀಚಿಕೆ ಆಗುತ್ತಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಿವರ್ತನೆ ಹೊಂದಬೇಕು ಎಂದರು.
ಪ್ರಾಚಾರ್ಯ ಎಂ.ಶಿವಯ್ಯ ಮಾತನಾಡಿ, ಎನ್ನೆಸ್ಸೆಸ್, ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ, ಧನಾತ್ಮಕ ಚಿಂತನೆ ಮೂಡಿಸುತ್ತದೆ. ಎನ್ನೆಸ್ಸೆಸ್ ಎಂದರೆ ಕೇವಲ ಸ್ವಚ್ಛತಾ ಕಾರ್ಯಕ್ರಮವಲ್ಲ. ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ಮಾನವೀಯತೆ, ನಾಯಕತ್ವ, ಸಂಘಟನಾ ಕೌಶಲ, ಶಿಸ್ತು ಕಲಿಸುತ್ತದೆ. ಎನ್ನೆಸ್ಸೆಸ್ ಶಿಬಿರ ವಿದ್ಯಾರ್ಥಿಗಳ ಜೀವನದ ಪರಿವರ್ತನೆಯ ಭಾಗವಾಗಿದೆ ಎಂದರು.
ಬಿಜೆಪಿ ಮುಖಂಡ ಕೆ.ಲಿಂಗರಾಜ ಹೊಸಳ್ಳಿ, ಶಿಬಿರಾಧಿಕಾರಿಗಳಾದ ಡಾ.ಅನಿಲ್‌ಕುಮಾರ, ಎಂ.ವೆಂಕಟನಾರಾಯಣ, ಪ್ರಾಧ್ಯಾಪಕರಾದ ಜಾಜಿ ದೇವೇಂದ್ರಪ್ಪ, ಸಂಗನಗೌಡ, ಬಸವರಾಜ ತಡಕಲ್, ಹನುಮನಗೌಡ ಇತರರಿದ್ದರು.