

ಮೂಡಿಗೆರೆ: ಸಮಾಜ ಪರಿವರ್ತನೆ ಹಾಗೂ ಉನ್ನತ ಸ್ಥಿತಿಯಲ್ಲಿ ಸಾಗಲು ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ಹೇಳಿದರು.
ಶನಿವಾರ ತಾಪಂನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಘಟನೆಗಳಿಂದ ಏರ್ಪಡಿಸಿದ್ದ ವಿವಿಧ ಕಾರ್ಮಿಕ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಿಗೆ ಗೌರವ, ರಕ್ಷಣೆ ದೊರಕಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರು ಸಾಮಾನ್ಯ ಜ್ಞಾನ ಹಾಗೂ ಕಾನೂನು ಅರಿತುಕೊಳ್ಳಬೇಕೆಂದು ಹೇಳಿದರು.
ತಾಪಂ ಇಒ ದಯಾವತಿ ಮಾತನಾಡಿ, ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಇತರ ಕಾರ್ಮಿಕರಿಗೆ ಅರಿವು ಮೂಡಿಸಬೇಕೆಂದು ಹೇಳಿದರು.
ವಕೀಲರ ಸಂದ ಅಧ್ಯಕ್ಷ ಬಿ.ಟಿ.ನಟರಾಜ್ ಮಾತನಾಡಿ, ಕೌಶಲಕ್ಕೆ ತಕ್ಕಂತೆ ಕೆಲಸ ಮತ್ತು ವೇತನ ಸಿಗದಿರುವುದರಿಂದ ಎಷ್ಟೋ ಮಂದಿ ಶಿಕ್ಷಣವಂತರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರು ಜೀವನ ಭದ್ರತೆ ಮಾಡಿಕೊಳ್ಳಲು ಹಾಗೂ ಸರ್ಕಾರದ ಸವಲತ್ತು ಪಡೆಯಲು ಮುಖ್ಯವಾಗಿ ಎಲ್ಲ ದಾಖಲೆಗಳನ್ನು ಸರಿಪಡಿಸಕೊಳ್ಳಬೇಕೆಂದು ಹೇಳಿದರು.
ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್.ರವಿಕುಮಾರ್, ರಿಜ್ವಾನ್, ಶ್ರೀನಾಥ್ ರೆಡ್ಡಿ, ಬಿ.ಸಿ.ಸುರೇಶ್, ಪ್ರಭಾಕರ್ ಇತರರಿದ್ದರು.