

ರಬಕವಿ/ಬನಹಟ್ಟಿ: ವಿಶ್ವಕ್ಕೆ ಅಹಿಂಸಾ ಸಂದೇಶ ಸಾರಿದ ಜೈನ ಧರ್ಮದ ಆಚರಣೆ ಮುಂದುವರಿಯಲು ಮಹಿಳೆಯರಿಂದ ಮಾತ್ರ ಸಾಧ್ಯವಿದೆ. ತಾಯಂದಿರು ಧರ್ಮ ಪಾಲನೆ ಮಾಡಿದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಭಗವಾನ ಮಹಾವೀರರ ಪಂಚ ತತ್ವಗಳಾದ ಅಹಿಂಸೆ, ಅಪರಿಗ್ರಹ, ಸತ್ಯ, ಬ್ರಹ್ಮಚರ್ಯ, ಅಸ್ತೇಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಬಾಳಾಸಾಹೇಬ ಲೋಕಾಪೂರ ಹೇಳಿದರು.
ತಾಲೂಕಿನ ಆಸಂಗಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜೈನ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳಗಾವಿ ಆಯುಕ್ತ ಭರಮಪ್ಪ ಲೋಕಾಪೂರ ಆಗಮಿಸಿ ಮಾತನಾಡಿ, ಸಾಧಕರಾಗಲು ಅಂಕಗಳು ಮುಖ್ಯವಲ್ಲ. ಬದಲಾಗಿ ಸರ್ವಾಂಗೀಣ ವಿಕಾಸ ಮುಖ್ಯ. ಪ್ರತಿಯೊಬ್ಬರು ತಮ್ಮ ಕಾಯಕದಲ್ಲಿ ಶ್ರದ್ಧೆ ಅಳವಡಿಸಿಕೊಂಡು ದುಶ್ಚಟಗಳಿಗೆ ಬಲಿಯಾಗದೆ ಧರ್ಮ ಮಾರ್ಗದಲ್ಲಿ ಸಾಗಿ ತಂದೆ ತಾಯಿಗಳಿಗೆ, ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಎಂದರು.
ಮುಖ್ಯ ಮಂತ್ರಿಗಳ ಪದಕ ಪಡೆದ ಸಿ ಪಿ.ಐ. ಭರತೇಶ ವೆಂಕಟಾಪೂರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದ್ದು, ಅವರನ್ನು ಪ್ರೇರೆಪಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಒದಗಿಸಿಕೊಡುವ ಕೆಲಸ ಸಮಾಜದ ಸಾಧಕರಿಂದ ಆಗಬೇಕು ಎಂದರು.
ಸಂಘದ ಅಧ್ಯಕ್ಷ ಧರೇಪ್ಪ ಕವಟಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದಾನಿಗಳ ಸಹಾಯದಿಂದ ಇಂದು 65 ವಿದ್ಯಾರ್ಥಿಗಳು ಮತ್ತು 16 ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಗೌರವಿಸಲಾಗಿದೆ ಎಂದರು.
ವರ್ಧಮಾನ ಕೋರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿ.ಪಂ ಸದಸ್ಯ ದೇವಲ ದೇಸಾಯಿ, ಪ್ರವೀಣ ನಾಡಗೌಡ, ಸುರೇಶ ಅಕ್ಕಿವಾಟ, ಅಜಿತ ಕಾಸರ, ಸುನಿಲ ಆಳಗೊಂಡ, ಸಚಿನ ಮುರಗುಂಡಿ, ನಿಲೇಶ ದೇಸಾಯಿ, ಪ್ರಭು ಹಾಡಕಾರ, ಅಲ್ಲಪ್ಪ ಸೌದತ್ತಿ, ಆದಿನಾಥ ಸಿದ್ದನ್ನವರ, ಮುತ್ತು ಶಿರಹಟ್ಟಿ, ಮಹಾವೀರ ಜಮಖಂಡಿ, ಅಭಯ ಶಿರಗಾರ, ಗಂಗಪ್ಪ ಖೇಮನ್ನವರ, ಅಜೀತ ಶಿರಹಟ್ಟಿ, ಲಕ್ಕಪ್ಪ ಸಂಕಾರ, ಅಮಿತ ಯಾಬನ್ನವರ, ಮಹಾವೀರ ಪಾಟೀಲ, ಅನೀಲ ಶಿರಗಾರ ಮತ್ತಿತರರಿದ್ದರು.
ಸಂಘದ ಪದಾಧಿಕಾರಿ ಎನ್.ಬಿ. ಜಮಖಂಡಿ ಸ್ವಾಗತಿಸಿ ವಂದಿಸಿದರು. ಭರತೇಶ ಲೋಕಾಪುರ ನಿರೂಪಿಸಿದರು. ಶೀತಲ ನಂದೆಪ್ಪನವರ, ಮಹಾವೀರ ಸೌದತ್ತಿ ಸತ್ಕಾರ ನೆರವೇರಿಸಿದರು.