

ಮದ್ದೂರು: ಪ್ರಸ್ತುತ ದಿನಗಳಲ್ಲಿ ಸಹಕಾರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಕಾಶಿ ವಿಶ್ವೇಶ್ವರನಾಥ ಸ್ವಾಮೀಜಿ ವ್ಯಾಖ್ಯಾನ ಮಂಟಪದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಮಾತೃ ವಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಧೈರ್ಯವಾಗಿ ಭಾಗವಹಿಸಿ ಅದ್ವಿತೀಯ ಸಾಧನೆ ಮಾಡುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ. ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎಂದರು.
ಪ್ರಸ್ತುತ ದಿನಗಳಲ್ಲಿ ದೇಶ ಕಾಯುವ ಯೋಧರಾಗಿ, ಗಗನಯಾನ, ವಿಮಾನ, ರೈಲು, ಮೆಟ್ರೋ ಓಡಿಸುವ ಆತ್ಮಸ್ಥೈರ್ಯ ಮಹಿಳೆಯರಲ್ಲಿ ಮೂಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಂಕರ ಸಭಾದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿ ಕೆಟ್ಟ ಹೆಸರು ಬರುವಂತೆ ಮಾಡುತ್ತಿರುವ ನಿಂದಕರ ಬಗ್ಗೆ ಕಠಿಣ ಕಾನೂನು ಕ್ರಮ ಆಗಬೇಕು. ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ ನೂರಾರು ಜನಪಯೋಗಿ ಕಾರ್ಯಕ್ರಮಗಳ ಜತೆಗೆ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ರೂಪಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರಾಜೇಶ್ವರಿ, ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕ ಬಿ.ಆರ್.ಯೋಗೇಶ್, ಜಿಲ್ಲಾ ಜಲಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಲಿಂಗೇಗೌಡ, ಮೇಲ್ವಿಚಾರಕಿ ಸಿ.ಎಸ್.ಚೈತ್ರಾ ಇದ್ದರು.