

ತೂಬಗೆರೆ: ಭಾರತ ಕೃಷಿ ಪ್ರಧಾನವಾದ ದೇಶವೆನ್ನುವ ಪರಿಕಲ್ಪನೆಗೆ ಪುರುಷರಿಗಿಂತ ಮಹಿಳೆಯರ ಪರಿಶ್ರಮ ಹೆಚ್ಚು ಕಾರಣ ಎಂದು ಪ್ರಧಾನ ಅರ್ಚಕ ಟಿ.ಎನ್. ಗುರುರಾಜಶರ್ಮ ಅಭಿಪ್ರಾಯಪಟ್ಟರು.
ಹೋಬಳಿ ಘಾಟಿ ಸುಬ್ರಹ್ಮಣ್ಯ ದಾಸೋಹ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಮೊದಲ ಬಾರಿಗೆ ಕೃಷಿ ಅನ್ವೇಷಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂಬುದು ಸಮಾಜ ಶಾಸಜ್ಞನರ ದೃಢವಾದ ನಿಲುವಾಗಿದ್ದರೂ ಮಹಿಳೆಯರ ಪರಿಶ್ರಮವನ್ನು ಪುರುಷ ಪ್ರಧಾನ ಸಮಾಜ ಸಹಜವಾಗಿ ಗುರುತಿಸುವುದಿಲ್ಲ ಎಂದರು.
ಪ್ರಗತಿಪರ ರೈತ ವಾಸುದೇವ್ ಮಾತನಾಡಿ, ಕೃಷಿ ಬದುಕಿನಲ್ಲಿ ಎಲ್ಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಹಾಗೂ ಶ್ರದ್ಧೆಯಿಂದ ನಿರ್ವಹಿಸುವುದರಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ ಎನ್ನಬಹುದು. ರೈತನೆಂದರೆ ಕೇವಲ ಪುರುಷನೆಂಬ ಮನಸ್ಥಿತಿ ಸಾಮಾನ್ಯವಾಗಿದೆ. ಜಗತ್ತು ಬದಲಾವಣೆ ಕಂಡರೂ ಮಹಿಳೆಯರೂ ಇನ್ನೂ ಕೂಲಿ ಆಳಿನಂತೆ ದುಡಿಯುತ್ತಿದ್ದಾಳೆ ಎಂದರು.
ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕೃಷಿ ಹಾಗೂ ಗ್ರಾಮೀಣ ಕಸುಬುಗಳಲ್ಲಿ ಮಹಿಳೆಯಿಲ್ಲದೆ ಯಾವುದೇ ಕೆಲಸ ನಡೆಯುವುದು ಕಷ್ಟಸಾಧ್ಯ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆ ಉನ್ನತೀಕರಿಸಿದಂತೆ ಕೃಷಿ ಕಡೆ ಒಲುವು ಕಡಿಮೆಯಾಗಿದೆ. ಸರ್ಕಾರಗಳ ನಿರ್ಲಕ್ಷ್ಯದಿಂದ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಇದರಿಂದ ಕೃಷಿಯಿಂದ ರೈತರು ವಿಮುಖರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷೆ ಪ್ರಮೀಳಮಹಾದೇವ್ ಮಾತನಾಡಿ, ಹಿಂದಿನಿಂದಲೂ ಮಹಿಳೆಗೆ ಸೂಕ್ತ ಸ್ಥಾನ ಮಾನ ಕಲ್ಪಿಸುವಲ್ಲಿ ಎಡವಿದ್ದರ ಪರಿಣಾಮ ವಾಸ್ತವಿಕ ನೆಲಗಟ್ಟಿನಲ್ಲಿ ಪ್ರಾಮುಖ್ಯತೆ ಸಿಗುತ್ತಿಲ್ಲ. ದೇಶದ ಆರ್ಥಿಕತೆಗೆ ಕೃಷಿ ಬೆನ್ನಲುಬಾದರೆ ಗ್ರಾಮೀಣ ಭಾಗದ ಶೇ.75 ಮಹಿಳೆಯರು ಕೃಷಿಗೆ ಬೆನ್ನಲುಬಾಗಿದ್ದಾರೆ ಎಂದರು.
ದೇಗುಲದ ಸಿಬ್ಬಂದಿಗಳಾದ ಘಾಟಿ ದೇಗುಲ ಕಾರ್ಯನಿರ್ವಾಹಣಾಧಿಕಾರಿ ಎನ್.ಕೃಷ್ಣಪ್ಪ, ತುರುವನಹಳ್ಳಿ ನರಸಮ್ಮವಾಸುದೇವ್, ಎಸ್.ಎಸ್. ಘಾಟಿ ಶಾಂತಿಭಾಯಿಗೋವಿಂದನಾಯಕ್, ಹೊಸಹಳ್ಳಿ ರೋಹಿಣಿ, ಹೆಸರಘಟ್ಟ ಉಮಾ ಅವರನ್ನು ಸನ್ಮಾನಿಸಲಾಯಿತು.