

ಹುಬ್ಬಳ್ಳಿ: ಯುವಕರು ಮುಖ್ಯವಾಗಿ ಭರವಸೆಯ ಹಾದಿಯಲ್ಲಿ ಧೈರ್ಯದಿಂದ ಕೈಗೊಳ್ಳುವ ನಿರ್ಧಾರಗಳು ಗುರಿ ಸಾಧನೆ ಹಾಗೂ ಕಂಡ ಕನಸು ನನಸು ಮಾಡಿಕೊಳ್ಳಲು ನೆರವಾಗುತ್ತವೆ, ಇಂತಹ ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಯಶಸ್ಸು ಒಲಿಯುತ್ತ ಹೋಗುತ್ತದೆ ಎಂದು ಪದ್ಮವಿಭೂಷಣ ಡಾ. ಕೆ. ಕಸ್ತೂರಿರಂಗನ್ ಸಲಹೆ ನೀಡಿದ್ದಾರೆ.
ಇಲ್ಲಿಯ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ನಲ್ಲಿರುವ ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿದ್ದ ಅವರು ಅನಿವಾರ್ಯ ಕಾರಣಗಳಿಂದ ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರ ಲಿಖಿತ ಭಾಷಣವನ್ನು ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಅವರು ವಾಚನ ಮಾಡಿದರು.
ವಿಶ್ವವಿದ್ಯಾಲಯಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸುಭದ್ರ ದೇಶ ನಿರ್ವಣಕ್ಕೆ ವಿಶ್ವವಿದ್ಯಾಲಯಗಳು ಅಡಿಪಾಯ ಹಾಕುತ್ತವೆ.
ಹೊಸ ಆಲೋಚನೆ, ಜ್ಞಾನ, ಯೋಜನೆಗಳು, ಸಂಶೋಧನೆಗಳು ಇಲ್ಲಿಂದಲೇ ಹೊರಹೊಮ್ಮುತ್ತವೆ. ಸಮಕಾಲೀನ ಜಗತ್ತಿಗೆ ಬೇಕಾದ ಕಲಿಕೆ ಒದಗಿಸುವ ಕೆಲಸ ಇಲ್ಲಿಂದ ಆಗುತ್ತದೆ ಎಂದರು.
ದೇಶದ ಪ್ರತಿಯೊಬ್ಬರನ್ನು ತಲುಪುವುದು ಹಾಗೂ ಬದುಕಿನ ಅಗತ್ಯಗಳನ್ನು ಈಡೇರಿಸುವ ಭರವಸೆಯನ್ನು ಹೊಸ ಶಿಕ್ಷಣ ನೀತಿ ಹೊಂದಿದೆ.
ಸಮಾಜದಲ್ಲಿ ಸಮಾನತೆ ತರುವ ಪ್ರಮುಖ ಉದ್ದೇಶ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಈ ನೀತಿ ಜಾರಿಯಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಚೇರ್ಮನ್ರೂ ಆಗಿರುವ ಡಾ. ಕಸ್ತೂರಿರಂಗನ್ ತಿಳಿಸಿದ್ದಾರೆ.
ವಿಜ್ಞಾನ ಯುಗದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿವೆ. ಆಧುನಿಕ ಸಮಾಜಕ್ಕೆ ತಾಂತ್ರಿಕತೆಯ ಅಗತ್ಯತೆ ಹೆಚ್ಚಾಗಿದೆ. ಬಿಗ್ ಡೇಟಾ ಎನಾಲಿಟಿಕ್ಸ್ ಹಾಗೂ ಮಶಿನ್ ಇಂಟಲಿಜೆನ್ಸ್ (ಎಂಐ), ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಶೀನ್ ಲರ್ನಿಂಗ್, 3ಡಿ ಪ್ರಿಂಟಿಂಗ್ ಹಾಗೂ ಕ್ಲೌಡ್ ಕಾಂಪ್ಯುಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿದರು.
ಕಲೆ, ಸಮಾಜ ವಿಜ್ಞಾನ, ನೈಸರ್ಗಿಕ ವಿಜ್ಞಾನ ಹಾಗೂ ಗಣಿತ, ಇಂಜಿನಿಯರಿಂಗ್ ಹಾಗೂ ತಾಂತ್ರಿಕತೆ ವಿಷಯಗಳ ಮೇಲೆ ಸಂಶೋಧನೆಗಳು ಹೆಚ್ಚಾಗಿ ನಡೆಯಬೇಕಿದ್ದು, ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಬಾಹ್ಯಾಕಾಶ ವಿಜ್ಞಾನದಲ್ಲೂ ಬಹಳಷ್ಟು ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ ಮಂಗಳಯಾನ ಯಶಸ್ವಿಯಾಗಿದ್ದು ಹೆಮ್ಮೆಯ ಸಂಗತಿ ಎಂದರು.
ಇಂತಹ ಅದ್ಭುತ ಸಾಧನೆಗಳಿಗೆ ಕಾರಣವಾಗುವ ವಿದ್ಯೆ, ಜ್ಞಾನ ಎಂಬ ಸಂಪತ್ತನ್ನು ಹಣದಂತೆ ಯಾರೂ ಕದಿಯಲಾರರು. ಪಿತ್ರಾರ್ಜಿತ ಆಸ್ತಿಯಂತೆ ಭಾಗ ಮಾಡಲೂ ಬರುವುದಿಲ್ಲ. ಆದರೆ, ವಿದ್ಯೆಯನ್ನು ಹಂಚಿದಷ್ಟು ಬೆಳೆಯುತ್ತದೆ ಎಂದು ತಮ್ಮ ಲಿಖಿತ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ.
ಹೆಚ್ಚಿನ ಪ್ಲೇಸ್ವೆುಂಟ್: ವಿಶ್ವವಿದ್ಯಾಲಯದ ವರದಿ ವಾಚನ ಮಾಡಿದ ಉಪಕುಲಪತಿ ಡಾ. ಅಶೋಕ ಶೆಟ್ಟರ್, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಇಂಜಿನಿಯರಿಂಗ್ ಶಿಕ್ಷಣ, ಸಂಶೋಧನೆ ಹಾಗೂ ಪ್ಲೇಸ್ವೆುಂಟ್ನಲ್ಲಿ ಅದ್ಭುತ ಸಾಧನೆ ಮಾಡಿದೆ.
ಕರೊನಾ ಸಾಂಕ್ರಾಮಿಕ ಸೇರಿ ಅನೇಕ ಸವಾಲುಗಳನ್ನು ಎದುರಿಸಿಯೂ ವಿದ್ಯಾರ್ಥಿಗಳು ಉತ್ತಮ ಕಲಿಕೆಯೊಂದಿಕೆ ಆವಿಷ್ಕಾರಗಳನ್ನು ಮಾಡಿದ್ದಾರೆ. ಕಳೆದ ವರ್ಷ ಶೇ. 85ರಷ್ಟು ಪ್ಲೇಸ್ವೆುಂಟ್ ದಾಖಲಾಗಿದೆ. ಇದು ಸಾಧ್ಯವಾಗಿರುವುದು ಚತುರ, ಪ್ರತಿಭಾವಂತ ವಿದ್ಯಾರ್ಥಿಗಳಿಂದಾಗಿ ಎಂದು ಹೇಳಿದರು.
ವಿಶ್ವವಿದ್ಯಾಲಯದ ಸಾಧನೆಗಳ ಪಟ್ಟಿ ಮಾಡಿದ ಶೆಟ್ಟರ್ ಅವರು, ಕ್ಯಾಂಪಸ್ನಲ್ಲಿ 135 ಸ್ಟಾರ್ಟ್ಅಪ್ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ಬೆಂಗಳೂರು ಹಾಗೂ ಬೆಳಗಾವಿಯ ಕ್ಯಾಂಪಸ್ಗಳನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದರು.
ಡೀನ್ ಪ್ರೊ. ಪ್ರಕಾಶ ತೆವರಿ ಅವರು, ಪದವಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು. ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಭಾಕರ ಕೋರೆ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಡಾ. ಅನಿಲಕುಮಾರ ನಂದಿ ಅವರು, ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳ ಮಾಹಿತಿ ನೀಡಿದರು.
ಶೈಕ್ಷಣಿಕ ಸಾಧಕರು: ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ವಿನಾಯಕ ಕುಲಕರ್ಣಿ ಹಾಗೂ ಇಂಜಿನಿಯರಿಂಗ್ ಎಜ್ಯುಕೇಶನ್ ರೀಸರ್ಚ್ನಲ್ಲಿ ಸಂಶೋಧನೆ ಕೈಗೊಂಡಿದ್ದ ಪ್ರೀತಿ ಬಳಿಗಾರ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿ 1,619 ವಿದ್ಯಾರ್ಥಿಗಳು ಪದವಿ ಪಡೆದರು. 35 ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದರು. ಇದರಲ್ಲಿ 25 ವಿದ್ಯಾರ್ಥಿನಿಯರು ಇರುವುದು ವಿಶೇಷ.
ಕುಲಸಚಿವ ಡಾ. ಬಸವರಾಜ ಅನಾಮಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.