ಮಲೇರಿಯಾ ತಡೆಗೆ ಸಾರ್ವಜನಿಕರ ಪಾತ್ರ ಮುಖ್ಯ

28BTP01
Published on

ಬೆಟ್ಟದಪುರ: ಸಮೀಪದ ಕಣಗಾಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ವಲಯ ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ನಡೆಯಿತು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿಂಧು ಮಾತನಾಡಿ, ಮಲೇರಿಯಾ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ ಬರುತ್ತದೆ. ಪ್ರಸಕ್ತ ಮಲೇರಿಯಾ ಪ್ರಕರಣಗಳು ಕಡಿಮೆ ಇದ್ದರೂ 2030ರ ವೇಳೆಗೆ ಮಲೇರಿಯಾ ಮುಕ್ತ ಗ್ರಾಮ, ಜಿಲ್ಲೆಯಾಗಿ ನಿರ್ಮಿಸಲು ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ. ಹಾಗಾಗಿ ಯಾವುದೇ ಜ್ವರ ಸೇರಿದಂತೆ ಆರೋಗ್ಯದಲ್ಲಿ ಏನೇ ಸಮಸ್ಯೆ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್ ಮಾತನಾಡಿ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಂಜೆ ಸೊಳ್ಳೆಗಳು ಹೆಚ್ಚಾಗುವುದರಿಂದ ರಾತ್ರಿ ವೇಳೆ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಮೊದಲೇ ನಾವು ಸೊಳ್ಳೆಗಳ ತಾಣವನ್ನು ನಾಶಮಾಡಿ ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಮಲೇರಿಯಾ ಕಾಯಿಲೆಗೆ ಕುರಿತ ಮಾಹಿತಿ ಹಾಗೂ ಚಿಕಿತ್ಸಾ ವಿಧಾನಗಳ ಜತೆ ಮುಂಜಾಗ್ರತೆ ಕ್ರಮದ ಬಗ್ಗೆ ತಿಳಿಸಿದರು.

ವಲಯ ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಹಿನ್ನೆಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಗ್ರಾಮದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಅರಿವು ಮೂಡಿಸಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್, ಸಿಬ್ಬಂದಿ ದಿವ್ಯರಾಣಿ, ಸವಿತಾ, ಲಾವಣ್ಯ, ಸಹನಾ, ರಾಜೇಶ್ವರಿ, ಭವಾನಿ ಸೇರಿದಂತೆ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net