

ನೆಲಮಂಗಲ: ಆಸ್ಪತ್ರೆಗಳಲ್ಲಿನ ಶುಶ್ರೂಷಕರ ನಿಸ್ವಾರ್ಥ ಸೇವೆ ಅಭಿನಂದನೀಯ ಎಂದು ತಾಲೂಕು ಆರೋಗ್ಯಾಧಿಕಾರಿ ಪಿ.ಹರೀಶ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ತಾಲೂಕು ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಶುಶ್ರೂಷಕರ ದಿನಾಚರಣೆಯಲ್ಲಿ ಮಾತನಾಡಿದರು.
ವೈದ್ಯರು ಮತ್ತು ಶುಶ್ರೂಷಕರು ಒಂದೇ ನ್ಯಾಣದ ಎರಡು ಮುಖಗಳಿದ್ದಂತೆ. ಪ್ರತಿಯೊಬ್ಬ ರೋಗಿಗೂ ಶುಶ್ರೂಷಕರ ಸೇವೆ ಅಗತ್ಯವಾಗಿದೆ. ರೋಗಿಯ ಮತ್ತು ಶುಶ್ರೂಷಕರ ಸಂಬಂಧ ತಾಯಿ ಮಕ್ಕಳ ಸಂಬಂಧವಾಗಿದೆ. ಶುಶ್ರೂಷಕರು ರೋಗಿಯನ್ನು ಪ್ರತಿ ಹಂತದಲ್ಲೂ ಗಮನಿಸುತ್ತಾರೆ. ನಗುಮುಖದ ಸೇವೆಯಿಂದ ರೋಗಿಯು ಗುಣಮುಖರಾಗಲು ಸಾಧ್ಯವಾಗಿದೆ ಎಂದರು.
ಶುಶ್ರೂಷಕ ಅಧಿಕಾರಿ ಆರ್.ನರಸಿಂಹಮೂರ್ತಿ ಮಾತನಾಡಿ, ಮಿಸ್ ಫ್ಮಾರೆನ್ಸ್ ನೈಟಿಂಗೇಲ್ ಅವರು 1820ರಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಎಲ್ಲವನ್ನು ತ್ಯಾಗ ಮಾಡಿ ಶುಶ್ರೂಷಕಿಯಾದರು. ನೊಂದವರ, ಗಾಯಾಳುಗಳ ಹಾಗೂ ಬಡರೋಗಿಗಳ ಚಿಕಿತ್ಸೆಗೆ ಜೀವನವನ್ನು ಮುಡುಪಾಗಿಟ್ಟವರು. ಮಹಾಯುದ್ದದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ಶುಶ್ರೂಷಕರಿಗೆ ಮಾದರಿಯಾಗಿದ್ದಾರೆ ಎಂದರು.
ಸರ್ಕಾರ ಕಳೆದ ನಾಲ್ಕೈದು ವರ್ಷಗಿಂದ ಸರ್ಕಾರಿ ನೌಕರರ ಸಂಘದಿಂದ ಶುಶ್ರೂಷಕ ಎಂಬ ಪದನಾಮವನ್ನು ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು ಇಂದು ಶುಶ್ರೂಷಕ ಎಂಬ ಪದನಾಮವನ್ನು ಶುಶ್ರೂಷಕಾಧಿಕಾರಿ ಎಂದು ಮರುನಾಮಕರಣಗೊಂಡಿದೆ ಎಂದು ತಿಳಿಸಿದರು.
ಕ್ಯಾಂಡಲ್ ನಮನ: ವಿಶ್ವ ಶುಶ್ರೂಷಕ ದಿನಾಚರಣೆ ಪ್ರಯುಕ್ತ ವಿಶ್ವದ ಲಕ್ಷಾಂತರ ಶುಶ್ರೂಷಕರಿಗೆ ಮಾದರಿಯಾಗಿರುವ ಮಿಸ್‌ಫ್ಮಾರೆನ್ಸ್‌ನೈಟಿಂಗೇಲ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಕ್ಯಾಂಡಲ್ ಬೆಳಗುವ ಮೂಲಕ ಗೌರವ ಸಲ್ಲಿಸಿಲಾಯಿತು. ನಂತರ ಕೇಕ್ ಕತ್ತರಿಸುವ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಹಾಗೂ ರೋಗಿಗಳಿಗೆ ವಿತರಣೆ ಮಾಡಿದರು.
ತಾಲೂಕು ಮುಖ್ಯ ಆರೋಗ್ಯಾಧಿಕಾರಿ ಪಿ.ನರಸಿಂಹಯ್ಯ, ವೈದ್ಯ ಎನ್.ಪಿ.ವಿನಯ್‌ಕುಮಾರ್, ಸಿ.ವಿನಯ್, ಎ.ಸಂಶಿಯಾನಾಜ್, ಎಸ್.ಎನ್.ನಾಗೇಶ್, ಎಸ್.ಸವಿತಾ, ಜೆ.ವಿ.ಸೋನಿಯಾ, ಎಸ್.ವಿಜಯಲಕ್ಷ್ಮೀ, ಶುಶ್ರೂಷಕ ಅಧಿಕಾರಿ ಕೆ.ರವಿಕುಮಾರ್ ಮತ್ತಿತರರಿದ್ದರು.