ಮೂಲ ಸಂಸ್ಕೃತಿ ಉಳಿಸುವಲ್ಲಿ ಬಂಜಾರ ಸಮುದಾಯದ ಪಾತ್ರ ಅನನ್ಯ

22HSN2
Published on

ಹಾಸನ: ಬಂಜಾರ ಜನಾಂಗವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಭಿಪ್ರಾಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಸಮುದಾಯವು ಒಗ್ಗಟಿನಿಂದ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುಲ್ಲಿ ಸಕ್ರಿಯವಾಗಿದೆ ಎಂದರು.

ಅಲೆಮಾರಿ ಜನಾಂಗವನ್ನು ನೆಲೆ ನಿಲ್ಲುವಂತೆ ಮಾಡಿದ ಹೆಗ್ಗಳಿಕೆ ಸಂತ ಸೇವಾಲಾಲ್‌ಗೆ ಸಲ್ಲುತ್ತದೆ. ಅಲ್ಲದೆ ಸಮುದಾಯದ ಪ್ರತಿಯೊಬ್ಬರೂ ಕೌಶಲವಂತರಾಗಬೇಕು ಹಾಗೂ ಮತ್ತೊಬ್ಬರಿಗೆ ಕಲಿಸುತ್ತಿರಬೇಕೆಂಬ ಉದ್ದೇಶ ಹೊಂದಿದ್ದರು ಎಂದು ಗಿರೀಶ್ ಹೇಳಿದರು.

ಬಂಜಾರ ಸಮುದಾಯದವರು ಕಷ್ಟ ಜೀವಿಗಳಾಗಿದ್ದು, ಕಾಡಿನಿಂದ ಆಯ್ದು ತಂದ ಕಟ್ಟಿಗೆಯನ್ನು ಮಾರಾಟ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಕ್ರಮೇಣ ಸಮುದಾಯ ಸಮಾಜದ ಮುಖ್ಯ ಭೂಮಿಕೆಗೆ ಬರುವಂತಾಯಿತು ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ಬಂಜಾರ ಸಮುದಾಯದ ಜನರು ಶಿಕ್ಷಿತರಾಗಬೇಕು. ಹಿಂದುಳಿದ ಜನಾಂಗದವರ ಏಳ್ಗೆಗಾಗಿ ಸರ್ಕಾರ ಸಾಕಷ್ಟು ಅನುದಾನ, ಸೌಲಭ್ಯ ನೀಡುತ್ತಿದೆ. ಹಾಗಾಗಿ ಲಂಬಾಣಿ ಸಮುದಾಯದವರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೊಸನೂರಿನ ಉಪನ್ಯಾಸಕ ಡಾ.ವಸಂತನಾಯ್ಕ ಮಾತನಾಡಿ, ನೀರಿನಿಂದ ಸ್ನಾನ ಮಾಡಿದವರು ಬಟ್ಟೆ ಬದಲಿಸಿದರೆ, ಬೆವರಿನಿಂದ ಸ್ನಾನ ಮಾಡಿದವರು ಇತಿಹಾಸವನ್ನೇ ಬದಲಾಯಿಸುತ್ತಾರೆಂದು ಸೇವಾಲಾಲರು ಅಂದೇ ನುಡಿದಿದ್ದರು ಎಂದು ಸ್ಮರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಬಂಜಾರ ಸಮಾಜ ಮುಖಂಡರಾದ ಬಿ.ರಾಜನಾಯ್ಕ, ಪುಟ್ಟನಾಯ್ಕ, ಗಂಗಾಧರ ನಾಯ್ಕ, ಸ್ವಾತಂತ್ರೃಹೋರಾಟಗಾರ ಎಚ್.ಎಂ. ಶಿವಣ್ಣ ಇತರರಿದ್ದರು.

ಆಕರ್ಷಕ ಮೆರವಣಿಗೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಆಕರ್ಷಕವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಮೆರವಣಿಗೆಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಚಾಲನೆ ನೀಡಿದರು. ವಿವಿಧ ಕಲಾತಂಡಗಳ ಜತೆಗೆ ಬಂಜಾರ ಸಮುದಾಯದ ಮಹಿಳೆಯರು ಪೂರ್ಣಕುಂಭ ಹೊತ್ತು, ಲಂಬಾಣಿ ಸಂಸ್ಕೃತಿಯ ಉಡುಗೆ ತೊಟ್ಟು ನೃತ್ಯ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net