

ರಾಮನಗರ : ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಕರ ಪಾತ್ರ ಪ್ರಮುಖ. ಶಿಕ್ಷಕ ವೃತ್ತಿ ಪವಿತ್ರ ವೃತ್ತಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಮರ ಕಲೆಗಳ ತಜ್ಞ ಡಾ.ಹಾಸನ ರಘು ತಿಳಿಸಿದರು.
ರಾಮನಗರದ ಜಾನಪದ ಲೋಕದಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜು ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಸಮುದಾಯ ಜೀವನ ಶಿಬಿರದಲ್ಲಿ ಮಾತನಾಡಿದರು.
ಶಿಕ್ಷಕರು ಸುಮಾರು 30-35 ವರ್ಷಗಳ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ನೋಡುತ್ತಾರೆ. ಆ ವಿದ್ಯಾರ್ಥಿಗಳಲ್ಲಿ ಅನೇಕರು ಸಮಾಜಮುಖಿಯಾಗಿ ಕೆಲಸ ಮಾಡುತ್ತಾರೆ. ಬೇರೆ ಯಾವ ವೃತ್ತಿಯಲ್ಲೂ ಈ ಬಗೆಯ ಮಾನಸಿಕ ತೃಪ್ತಿ, ಸಂತೋಷ ಸಿಗುವುದು ಕಷ್ಟ ಎಂದರು.
ಮಕ್ಕಳಿಗೆ ಪಾಲಕರ ನಂತರದ ಸ್ಥಾನವನ್ನು ಶಿಕ್ಷಕರು ತುಂಬುತ್ತಾರೆ. ಪಠ್ಯ ಪುಸ್ತಕದಲ್ಲಿ ಕಲಿಯುವುದಕ್ಕೂ, ಜೀವನದಲ್ಲಿ ಕಲಿಯುವುದಕ್ಕೂ ವ್ಯತ್ಯಾಸವಿದೆ. ನೈಜ ಜೀವನದ ಮೌಲ್ಯ, ದಯ, ಶಿಸ್ತನ್ನು ಶಿಕ್ಷಕರು ಕಲಿಸಬೇಕು ಎಂದು ತಿಳಿಸಿದರು.
ಕಾವೇರಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಇ.ಬಿ. ರಾಜೇಶ್ ಮಾತನಾಡಿ, ಶಿಕ್ಷಕರು ಜೀವನದುದ್ದಕ್ಕೂ ಕಲಿಯುತ್ತಲೇ ಇರಬೇಕು. ಇದರಿಂದಾಗಿ ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯ. ಶಿಕ್ಷಕರನ್ನು ನೋಡಿ ಮಕ್ಕಳು ಅವರಂತೆ ಆಗಬೇಕು ಎಂದು ನಿರ್ಧರಿಸುವಂತಾಗಬೇಕು ಎಂದರು. ಶಿಬಿರದ ಮುಖ್ಯಸ್ಥ ಶಿವಗುಂಡಪ್ಪ, ಸಹಮುಖ್ಯಸ್ಥ ಮೋಹನ್ ಕುಮಾರ್, ಬಿಂದುಕುಮಾರ್, ಡಾ.ಚಂದ್ರಮೌಳೇಶ್ ಇದ್ದರು.