

ಮಡಿಕೇರಿ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹೇಳಿದರು.
ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ವತಿಯಿಂದ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುರುಗಳಿಲ್ಲದಿದ್ದರೆ ಸಮಾಜದ ಸ್ಥಿತಿಗತಿಗಳು ಬೆರಡೆಯೇ ಸಾಗುತ್ತಿತ್ತು. ಗುರುವಿಂದಲೆ ಕೆಡಕುಗಳು ಮರೆಯಾಗಿ ಒಳಿತಾಗುತ್ತಿರುವುದು. ಆದುದರಿಂದಲೇ ಪ್ರತಿಯೊಬ್ಬರ ಜೀವನದಲ್ಲಿಯೂ ಗುರು ಮಹತ್ವ ಪೂರ್ಣವಾಗಿದ್ದಾರೆ ಎಂದು ಗುರುವಿನ ಮಹತ್ವ ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗಲು ಶಾಲೆಗಳಲ್ಲಿ ಅನೇಕ ಬದಲಾವಣೆ ಹಾಗೂ ನೂತನ ಕಾರ್ಯಕ್ರಮಗಳನ್ನು ತರಲಾಗುತ್ತಿದೆ ಎಂದರು.
ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಅದನ್ನು ಸರಿಪಡಿಸಿ ಕೊಡುವುದರ ಭರವಸೆಯನ್ನು ನೀಡಿದ ಅವರು, ಶಿಕ್ಷಕರುಗಳು ಸಹ ಒಟ್ಟಾಗಿ ಹೋರಾಟ ನಡೆಸಬೇಕು. ತಮಗೆ ದೊರಕಬೇಕಾದ ಪ್ರತಿಯೊಂದು ಸವಲತ್ತು ಪಡೆದುಕೊಳ್ಳಬೇಕು ಹಾಗೆಯೇ ಪ್ರಾಮಾಣಿಕ ಪ್ರಯತ್ನ ನಡೆಸಿ ಬೋಧಿಸಿದ ಶಿಕ್ಷಕರುಗಳಿಗೆ ವಂದಿಸಿ, ಗೌರವಿಸಿದರು.
ನಿವೃತ್ತರಾಗಿರುವ ಶಿಕ್ಷಕರಿಗೆ ಮತ್ತೆ ಪುನಹ ಅವಕಾಶ ಕಲ್ಪಿಸುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಿವೃತ್ತಿ ಹೊಂದಿದವರು ಸಹ ಮತ್ತೆ ಪುನಹ ಅತಿಥಿ ಶಿಕ್ಷಕರಾಗಿ ಬೋಧಿಸಲು ಇಚ್ಛಿಸಿದರೆ ಅವರುಗಳಿಗೆ ಅವಕಾಶ ಕಲ್ಪಿಸುವುದರ ಕುರಿತು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮೈಸೂರಿನ ಉಪನ್ಯಾಸಕ ಎಸ್.ಪಿ.ನಾಗರಾಜು ಮಾತನಾಡಿ, ಮೊದಲು ಗುರುವಿನ ಉಪಚಾರವಾದ ನಂತರ ಬಂಧುಗಳನ್ನು ಉಪಚರಿಸಬೇಕು. ಮೊದಲು ಗುರುವನ್ನು ಪೂಜಿಸಿ ಗೌರವಿಸಬೇಕು. ನಂತರ ದೇವರನ್ನು ಪೂಜಿಸಬೇಕು, ಜೊತೆಗೆ ನಮಸ್ಕರಿಸಬೇಕು. ಏಕೆಂದರೆ ಗುರುವಿನಿಂದಲೇ ನಮಗೆ ಪುಣ್ಯ ಲೋಕವು ಪ್ರಾಪ್ತಿಯಾಗುವುದು ಮತ್ತು ಗುರುವಿನಿಂದಲೇ ನಮಗೆ ಮುಕ್ತಿಯು ದೊರೆಯುವುದು ಎಂದು ನುಡಿದರು.
೨೦೨೫-೨೬ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರಾದ ಕೆ.ಆರ್.ಶಾಲಿನಿ, ಎ.ಡಿ.ಮೀನಾಕ್ಷಿ, ಎಂ.ವನಜ, ಕೆ.ವಿ.ಜಾನ್ಸಿ, ಎಸ್.ಎ.ಯೋಗೇಶ್, ಎಂ.ಎಸ್.ಅಬ್ದುಲ್ ರಬ್, ಎ.ಕೆ.ಮಾಚಮ್ಮ, ಕೆ.ಸುಷಾ, ಎಚ್.ಡಿ.ಲೋಕೇಶ್ ಇವರಿಗೆ ಶಾಸಕರಾದ ಮಂತರ್ ಗೌಡ ರವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ನಿವೃತ್ತ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಶಾಸಕರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸದಾಶಿವಯ್ಯ ಪಲ್ಲೆದ್, ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ಪೂರ್ಣೇಶ್, ಜಿಲ್ಲಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ದೇವಕಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ಮತ್ತಿತರರು ಇದ್ದರು.